ನಾಗಮಂಗಲ ಜ 12;ರಾಜ್ಯದಲ್ಲಿ ಈ ವರ್ಷ ಈಗಾಗಲೇ 7 ಲಕ್ಷ ಕೃಷಿಕರಿಗೆ 475 ಕೋಟಿ ರೂ ಬೆಳೆ ವೆಮೆ ಪರಿಹಾರ ಒದಗಿಸಲಾಗಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿಯಲ್ಲಿ ಏರ್ಪಡಿಸಿರುವ ಶ್ರೀ ಶ್ರಿ ಶ್ರೀ ಡಾ. ಬಾಲ ಗಂಗಾಧರ ನಾಥ ಸ್ವಾಮೀಜಿಯವರ
79ನೇ ಜಯಂತೋತ್ಸವ, 11ನೇ ಸಂಸ್ಮರಣಾ ಸಮಾರಂಭ ಹಾಗೂ ಕೃಷಿ ಮೇಳ ಮತ್ತು ರೈತ ಸಂಗಮ ಕಾರ್ಯಕ್ರಮಗಳನ್ನು ಅವರು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಶೇ 2% ಅಂದರೆ ಸುಮಾರು 20 ಲಕ್ಷ ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ.
ಈ ವರ್ಷ ಬರ ಪರಿಸ್ಥಿತಿ ಹೆಚ್ಚಿರುವ ಕಾರಣ ಇನ್ನೂ 1000 ಕೋಟಿ ರೂ ವಿಮೆ ಹಣ ರೈತರಿಗೆ ನೇರವಾಗಿ ವರ್ಗಾವಣೆಯಾಗಲಿದೆ ಎಂದರು.
ಕೃಷಿಕರು ಸದೃಢವಾಗಬೇಕು ಆಗ ಮಾತ್ರ ದೇಶದ ಸಂಪೂರ್ಣ ಏಳಿಗೆ ಸಾಧ್ಯ ಎಂದ ಸಚಿವರು ಸಾಂಪ್ರದಾಯಿಕ ಕೃಷಿ ಪದ್ದತಿ ಜೊತೆಗೆ ಯಾಂತ್ರೀಕರಣ, ನವ ಸಂಶೋಧನೆಗಳ ಫಲವೂ ರೈತಗೆ ಸುಲಭವಾಗಿ ತಲುಪಬೇಕು .ಕೃಷಿ ವಿವಿ ಗಳು ಹಾಗೂ ಇಲಾಖೆ ಗಳು ಈ ಕೆಲಸ ಮಾಡಬೇಕು ಎಂದು ಹೇಳಿದರು.
ದೇಶದಲ್ಲಿ ಶೇ 70 ಜನ ,ಕೃಷಿ ಅವಲಂಭಿತರಾಗಿದ್ದು ಬಹುತೇಕ ರೈತರು ಬಡತನದಲ್ಲಿ ಜೀವನ ದೂಡುತ್ತಿದ್ದಾರೆ .
ಅವರ ಶ್ರೇಯೋಭಿವೃದ್ದಿ ಸರ್ಕಾರದ ಹಾಗೂ ಸಮಾಜದ ಕರ್ತವ್ಯ ಎಂದು ಎನ್ ಚಲುವರಾಯಸ್ವಾಮಿ ಹೇಳಿದರು.
ಆದಿ ಚುಂಚನಗಿರಿ ಮಠದ ಹಿರಿಮೆ ಹೆಚ್ಚಿಸಿದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಯವರ ಸ್ಮರಣಾರ್ಥ ಕೃಷಿ ಕಾಲೇಜು ಪ್ರಾರಂಭಿಸಲು ಶ್ರೀಮಠ ಪ್ರಯತ್ನ ನಡೆಸಿದೆ . ನಾವೂ ನಿರ್ಮಲಾನಂದ ನಾಥ ಸ್ವಾಮೀಜಿ ಅವರ ಸೂಚನೆ ಪಾಲಿಸಿ ಅವರ ಆಶಯ ಈಡೇರಿಸಲು ಪ್ರಯತ್ನ ನಡೆಸುತ್ತಿದ್ದೇವೆ ಎಂದು ಕೃಷಿ ಸಚಿವರು ಹೇಳಿದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ಸಾವಯವ ,ಸಿರಿಧಾನ್ಯ ಅಂತರಾಷ್ಟ್ರೀಯ ವಾಣಿಜ್ಯ ಮೇಳ ಅತ್ಯಂತ ಯಶಸ್ವಿಯಾಗಿ ನಡೆಸಿದೆ.
ರೈತರು ಸಕ್ರಿಯವಾಗಿ ಪಾಲ್ಗೊಂಡಿದ್ದು ವಾಣಿಜ್ಯ ಒಪ್ಪಂದಗಳಲ್ಲೂ ಭಾಗಿಯಾಗಿದ್ದಾರೆ ಇದೇ ರೀತಿ ತಮ್ಮ ಉತ್ಪನ್ನಗಳ ಮೌಲ್ಯ ವರ್ಧನೆಗೂ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.
ಸರ್ಕಾರ ಸ್ತ್ರೀ ಸಬಲೀಕರಣಕ್ಕೆ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಕೃಷಿ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ನುಡಿದಂತೆ ನಡೆದಿದ್ದೇವೆ. ಜನರೂ ಸರ್ಕಾರಕ್ಕೆ ಬಲ ತುಂಬ ಬೇಕು ಎಂದರು.
ಆದಿ ಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶ್ರೀ ಡಾ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ ಕೃಷಿಕರು ಬರಿ ಶ್ರಮಿಕರಾಗದೆ, ನಿಪುಣರೂ ಅಗಬೇಕು ಎಂದರು. ಇದೀಗ ಸೆಕೆಂಡರಿ ಕೃಷಿ ಹೆಚ್ಚು ಲಾಭದಾಯಕವಾಗಿದ್ದು ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೂ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು. ರೈತರೇ ದೇಶದ ಬೆನ್ನೆಲುಬು.
ಅವರ ಬದುಕು ಹಸನಾಗಬೇಕು . ದೇಶದಲ್ಲಿ ಐ.ಟಿ ,ಬಿ.ಟಿ ಕ್ಷೇತ್ರದಲ್ಲಿ ಆದಂತೆ ಕೃಷಿ ಕ್ಷೇತ್ರದಲ್ಲಿಯೂ ಸಾಕಷ್ಟು ತಾಂತ್ರಿಕ ಆವಿಷ್ಕಾರಗಳಾಗಿದ್ದು ಅದನ್ನು ಅಳವಡಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದರು.
ಒಂದೊಮ್ಮೆ ಬಡತನ ಹಸಿವು ಎದುರಿಸಿದ್ದ ಭಾರತದಲ್ಲಿ ಹಸಿರು ಕ್ರಾತಿ ದೇಶದ ಚಿತ್ರಣ ಬದಲಿಸಿತು.ಹಾಗೇ ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ತಾಂತ್ರಿಕ ವೈಜ್ಞಾನಿಕ ಬದಲಾವಣೆ ಬೇಕಿದೆ ಎಂದರು.
ಶ್ರೀ ಮಠ ಅನ್ನ ಶಿಕ್ಷಣ ದಾಸೋಹಕ್ಕೆ ಹೆಸರುವಾಸಿ. ಇದೆಲ್ಲಾ ಸಾಧ್ಯವಾಗಿದ್ದು ರೈತರಿಂದ .ಹಾಗಾಗಿ ಕೃಷಿಕರ ಸಬಲೀಕರಣಕ್ಕೆ ಮಠ ಸದಾ ತುಡಿಯುತ್ತದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ
ಅವರು, ಕೃಷಿಗೆ ಸರಿಯಾದ ಆದ್ಯತೆ ನೀಡಿದಾಗ ಮಾತ್ರ ದೇಶದ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದರು.
ನೀರಿನ ಮಿತ ಬಳಕೆ ಬಗ್ಗೆ ರೈತರು ಗಮನ ಹರಿಸಬೇಕು.ಕೃಷಿ ಶ್ರೇಷ್ಠ ಜೀವನ ಸಂಸ್ಕೃತಿ. ಅದನ್ನು ಉತ್ತಮ ಗೊಳಿಸುತ್ತಾ ಸಾಗಿ ಎಂದು ರೈತರಿಗೆ ಕರೆ ನೀಡಿದರು.
ಕೃಷಿ ಆಯುಕ್ತರಾದ ವೈ .ಎಸ್ .ಪಾಟೀಲ್ ಅವರು ಮಾತನಾಡಿ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸಮಾಜಿಕ, ಶೈಕ್ಷಣಿಕ, ಆದ್ಯಾತ್ಮಿಕ ಹಾಗೂ ಕೃಷಿಪರ ಕಾಳಜಿ ,ಚಿಂತನೆ ಮತ್ತು ಸೇವೆ ಇಡೀ ಜಗತ್ತೇ ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.
ಮಧ್ಯವರ್ತಿಗಳಿಂದ ಕೃಷಿಕರ ಶೋಷಣೆ ತಪ್ಪಿಸಿ ರೈತರನ್ನೇ ಉದ್ಯಮಿಗಳನ್ನಾಗಿಸಬೇಕೆಂಬುದು ಕೃಷಿ ಸಚಿವ ಎನ್ ಚಲುವರಾಯ ಸ್ವಾಮಿ ಅವರ ಆಶಯವಾಗಿದೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಕೃಷಿ ನಿರ್ದೇಶಕರಾದ ಡಾ ಜಿ.ಟಿ ಪುತ್ರ, ಮಂಡ್ಯ ಜಿಲ್ಲಾ ಎಸ್ ಪಿ. ಜಿಲ್ಲಾ ಯತೀಶ್, ಸಿ.ಇ.ಒ ತನ್ವೀರ್ ಆಸಿಫ್ ,
ಬೆಂಗಳೂರು ಕೃಷಿ ವಿ.ವಿ.ಉಪ ಕುಲಪತಿ ಡಾ. ಎಸ್.ವಿ .ಸುರೇಶ್ ಕೆಪೆಕ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಂ.ಎಸ್ ಬಂಥನಾಳ್ ಜಂಟಿ ಕೃಷಿ ನಿರ್ದೇಶಕರಾದ ಅಶೋಕ ಕುಮಾರ್, ಮತ್ತಿತರರು ಹಾಜರಿದ್ದರು..