ಬೆಂಗಳೂರು:-ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಯುವನಿಧಿ ಯೋಜನೆಯೂ ಒಂದಾಗಿದೆ. ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಸರ್ಕಾರ ಜಾರಿಗೊಳಿಸಿದೆ. ಇದೀಗ ಐದನೇ ಗ್ಯಾರಂಟಿ ಯುವನಿಧಿ ಜಾರಿಗೊಳಿಸಲಿದೆ. ಈ ಯೋಜನೆಯ ಪ್ರಕಾರ ನಿರುದ್ಯೋಗಿ ಪದವೀಧರ ಹಾಗೂ ಡಿಪ್ಲೊಮಾ ಪದವೀಧರರಿಗೆ ಪ್ರತಿ ತಿಂಗಳು ಭತ್ಯೆ ಸಿಗಲಿದೆ. ಪದವೀಧರರಿಗೆ ಪ್ರತಿ ತಿಂಗಳು 3000 ರೂಪಾಯಿ ನೀಡಿದರೆ, ಡಿಪ್ಲೊಮಾ ಪದವೀಧರರಿಗೆ 1500 ರೂಪಾಯಿ ನೀಡಲಾಗುತ್ತದೆ. ಪದವೀಧರರಿಗೆ ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷದವರೆಗೆ ನೀಡಲಾಗುತ್ತದೆ.
ಷರತ್ತುಗಳು ಏನು?
ಉದ್ಯೋಗ ಸಿಕ್ಕಿದ ಕೂಡಲೇ ಈ ಸೌಲಭ್ಯ ಸ್ಥಗಿತಗೊಳ್ಳಲಿದೆ.
ಅರ್ಜಿ ಸಲ್ಲಿಸುವವರು ಕರ್ನಾಟಕದ ನಿವಾಸಿಯಾಗಿರಬೇಕು.
2023ರಲ್ಲಿ ಪದವಿ/ ಡಿಪ್ಲೊಮಾ ಉತ್ತೀರ್ಣರಾಗಿರಬೇಕು.
ಉತ್ತೀರ್ಣರಾಗಿ 180 ದಿನಗಳಾದರೂ ಉದ್ಯೋಗ ಸಿಗದೆ ನಿರುದ್ಯೋಗಿಯಾಗಿರಬೇಕು.
ಅರ್ಜಿ ಸಲ್ಲಿಸಿದ ದಿನದಿಂದ ಹುದ್ದೆ ಸಿಗುವವರೆಗೂ ಅಥವಾ 2 ವರ್ಷ ಗರಿಷ್ಠ ಅವಧಿವರೆಗೆ ಮಾತ್ರ ನಿರುದ್ಯೋಗ ಭತ್ಯೆ ಸಿಗಲಿದೆ.
ಅರ್ಜಿ ಸಲ್ಲಿಸಲು ಯಾವ ದಾಖಲೆ ಬೇಕು?
ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಎಸ್ಎಸ್ಎಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣಪತ್ರಗಳು ಹಾಗೂ ರೇಷನ್ ಕಾರ್ಡ್ ದಾಖಲೆಗಳು ಬೇಕು.
ಎಲ್ಲಿ ಅರ್ಜಿ ಸಲ್ಲಿಸಬಹುದು?
ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಸೇವಾಸಿಂಧು ಪೋರ್ಟಲ್ಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಯಾರು ಅರ್ಹರಲ್ಲ?
ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರಿಸುವವರಿಗೆ ಯೋಜನೆ ಅನ್ವಯಿಸುವುದಿಲ್ಲ.
ಶಿಷ್ಯ ವೇತನವನ್ನು ಪಡೆಯುತ್ತಿರುವವರಿಗೆ ಯುವನಿಧಿ ಅನ್ವಯಿಸುವಿದಿಲ್ಲ.
ಸರ್ಕಾರಿ/ಖಾಸಗಿ ವಲಯದಲ್ಲಿ ಉದ್ಯೋಗ ಪಡೆದವರಿಗೆ ಅನ್ವಯ ಆಗುವುದಿಲ್ಲ.