ಶಿವಮೊಗ್ಗ:– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಮಹತ್ವಾಕಾಂಕ್ಷೆ 5ನೇ ಗ್ಯಾರೆಂಟಿ ಯೋಜನೆಯಾಗಿರುವ “ಯುವನಿಧಿ”ಗೆ ಇಂದು ಚಾಲನೆ ನೀಡಿದರು
ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಮಾಡಿದರು.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರೆಂಟಿಗಳ ಪೈಕಿ ಇದು ಕೊನೆಯ ಗ್ಯಾರೆಂಟಿ ಯೋಜನೆ. ಯುವನಿಧಿ ಜಾರಿಯೊಂದಿಗೆ ಕಾಂಗ್ರೆಸ್ ಪಕ್ಷ ನೀಡಿದ ಎಲ್ಲ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದಂತೆ ಆಗಿದೆ. ಯುವನಿಧಿ ಯೋಜನೆಗೆ 5.29 ಲಕ್ಷ ನೋಂದಣಿ ಗುರಿ ಇರಿಸಿಕೊಂಡಿದ್ದು, ಈಗಾಗಲೇ 61 ಸಾವಿರಕ್ಕೂ ಹೆಚ್ಚು ನೋಂದಣಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಗೂ ಮೊದಲು, ನಾಡಿನ ಹೆಸರಾಂತ ಸಂಗೀತಗಾರರು ನಡೆಸಿಕೊಟ್ಟ ತತ್ವಪದ,ಜನಪ್ರಿಯ ಚಿತ್ರಗೀತೆಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಯುವಕ-ಯುವತಿಯರು ಲಯಬದ್ಧವಾಗಿ ಹೆಜ್ಜೆ ಹಾಕಿದ್ದು ಕಾರ್ಯಕ್ರಮದ ಸಂತಸ,ಸಂಭ್ರಮಗಳನ್ನು ನೂರ್ಮಡಿಗೊಳಿಸಿತು.
ಸಂತ ಶಿಶುನಾಳ ಶರೀಫರ ‘ಕೋಡಗನ್ನ ಕೋಳಿ ನುಂಗಿತ್ತ’ ,”ತರವಲ್ಲ ತಗೀ ನಿನ್ನ ತಂಬೂರಿ ಸ್ವರ” ತತ್ವಪದಗಳು ಅಜಯ್ ವಾರಿಯರ್ ಮತ್ತು ತಂಡದವರಿಂದ ಅನುರಣಿಸಿದವು, ಸಂತೋಷದೇವ್ ಅವರು ಹಾಡಿದ “ಬೆಳ್ಳಿ ಮೂಡಿತೋ ಕೋಳಿ ಕೂಗಿತೋ” ಡಾ.ರಾಜ್ ಅಭಿನಯದ ಗೀತೆಗೆ ನೆರೆದ ಜನ ಕುಣಿದು ಕುಪ್ಪಳಿಸಿತು, ಅನುರಾಧಭಟ್ ಅವರು “ಅಪ್ಪ ಐ ಲವ್ ಯೂ” , “ಕಣ್ಣು ಹೊಡಿಯಾಕ ಮೊನ್ನೆ ಕಲತನೀ….” ಹಾಡುಗಳು ಕೇಳುಗರ ಮನಗೆದ್ದವು.
ಸಮೂಹ ವೃಂದಗಾನದಲ್ಲಿ ಮೂಡಿ ಬಂದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಹಾಡು ಸಭಾಮಂಟಪದಲ್ಲಿ ಸಂಚಲನ ಉಂಟು ಮಾಡಿತು.”ಗೊಂಬೆ ಹೇಳುತೈತೆ ಮತ್ತೆ ಹೇಳುತೈತೇ ನೀನೆ ರಾಜಕುಮಾರ” ಗೀತೆಯು ಯುವಸಮೂಹವನ್ನು ಭಾವಪರವಶರನ್ನಾಗಿಸಿತು