ದೇವರಹಿಪ್ಪರಗಿ ತಾಲೂಕು ಸೇರಿದಂತೆ ಜಿಲ್ಲಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬನ್ನು ಕಾರ್ಖಾನೆಗೆ ಸಾಗಿಸಲು ರೈತರು ಹರಸಾಹಸ ಪಡುತ್ತಿದ್ದಾರೆ.
ಬೆಳೆದ ಕಬ್ಬು ಕಟಾವು ಮಾಡಿ ಸಕ್ಕರೆ ಕಾರ್ಖಾನೆಗಳಿಗೆ ರವಾನಿಸಲು ನುರಿತ ಕಾರ್ಮಿಕರು ಕೊರತೆ ಒಂದೆಡೆಯಾದರೆ, ಇನ್ನೊಂದೆಡೆ ಬೆಳೆದ ಕಬ್ಬು ಗಾಳಿಗೆ ನೆಲಕ್ಕೆ ಒರಗಿ ಬೀಳುತ್ತಿದೆ. ಮೇಲಾಗಿ ಈ ಸಲ ನೀರಿನ ಕೊರತೆಯುಂಟಾಗಿ ಕಬ್ಬು ಎತ್ತರವಾಗಿ ಬೆಳೆದಿಲ್ಲ, ಇದರಿಂದ ಕಬ್ಬು ಕಡಿಯಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಕಾರ್ಖಾನೆ ನಿಗದಿಪಡಿಸಿದ ದರ ನೀಡುತ್ತದೆ. ಆದರೆ, ಈಗ ಕಾರ್ಖಾನೆ ನೀಡುವ ಕಟಾವು ದರದ ಜತೆಗೆ ರೈತರಿಗೆ ಎಕರೆಗೆ 8 ರಿಂದ 10 ಸಾವಿರ ರೂ. ಹೆಚ್ಚುವರಿ ಹಣವನ್ನು ಏಜೆಂಟರ್ ಮೂಲಕ ಕೇಳುತ್ತಿದ್ದಾರೆ ಎಂದು ಕಬ್ಬು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
11 ತಿಂಗಳದ ಕಬ್ಬು ಕಟಾವಿಗೆ ಬಂದಿದೆ. ಕಾರ್ಖಾನೆಗೆ ಸಂಪರ್ಕಿಸಿದರೆ ಕಟಾವು ತಂಡ ಬರುತ್ತದೆ ಎಂದು ಹೇಳುತ್ತಾರೆ. ಆದರೆ, ಹಲವು ವರ್ಷಗಳಿಂದ ಕಬ್ಬು ಬೆಳೆಯುತ್ತಿರುವ ರೈತರು, ಏಜೆಂಟರ್ ಮೂಲಕ ಹೆಚ್ಚುವರಿ ಹಣದ ಆಮಿಷ ನೀಡಿ ತಮ್ಮ ಜಮೀನುಗಳಿಗೆ ಕಟಾವು ಗ್ಯಾಂಗ್ ಕರೆದೊಯ್ಯುತ್ತಿದ್ದಾರೆ. ಇದರಿಂದ ಹೊಸದಾಗಿ ಕಬ್ಬು ಬೆಳೆದ ರೈತರು ಕಾರ್ಮಿಕರು ಸಿಗದೆ ಪರದಾಡುವಂತಾಗಿದೆ.