ಬೆಂಗಳೂರು: ಕಾಟೇರ’ (Katera) ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ (Party) ಅವಧಿ ಮೀರಿ ಬೆಳಗಿನ ಜಾವದವರೆಗೆ ಚಿತ್ರತಂಡ ಪಾರ್ಟಿ ಮಾಡಿತ್ತು ಎಂಬ ಆರೋಪದ ಮೇಲೆ ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಕೆಲವು ಚಿತ್ರತಂಡದ ಸದಸ್ಯರು ಹಾಗೂ ಕೆಲವು ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರು. ಹಾಗಾಗಿ 12.1.24(ಇಂದು) ಶುಕ್ರವಾರ ಮಧ್ಯಾಹ್ನ 2.30ಕ್ಕೆ ರಾಕ್ ಲೈನ್ ವೆಂಕಟೇಶ್, ದರ್ಶನ್, ತರುಣ್ ಸುಧೀರ್ ಅವರು ಸೇರಿದಂತೆ ನೋಟಿಸ್ ಜಾರಿಯಾಗಿರುವ ಎಲ್ಲರೂ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹೋಗುತ್ತಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಪೊಲೀಸರು ನೋಟಿಸ್ ಕಳುಹಿಸಿದ್ದರು. ದರ್ಶನ್ (Darshan) ಮತ್ತು ತಂಡ ದುಬೈನಲ್ಲಿದ್ದ ಕಾರಣದಿಂದಾಗಿ ಹಾಜರಾಗಲು ಆಗಿರಲಿಲ್ಲ. ನೆನ್ನೆಯಷ್ಟೇ ದುಬೈನಿಂದ ಚಿತ್ರತಂಡ ಬೆಂಗಳೂರಿಗೆ ವಾಪಸ್ಸಾಗಿದ್ದು, ಇಂದು ಎಲ್ಲರೂ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ ನಟನೆಯ ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋ ಆಯೋಜನೆಯಾಗಿತ್ತು. ಸೆಲೆಬ್ರಿಟಿ ಶೋ ಮುಗಿಸಿಕೊಂಡು ಪಕ್ಕದಲ್ಲೇ ಇದ್ದ ಪಬ್ ನಲ್ಲಿ ತಡರಾತ್ರಿವರೆಗೂ ದರ್ಶನ್ ಮತ್ತು ಹಲವು ನಟರು ಪಾರ್ಟಿ ಮಾಡಿದ್ದಾರೆ ಎನ್ನುವ ಆರೋಪವಿದೆ. ಈ ಘಟನೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಕೂಡ ಆಗಿತ್ತು. ಅದಕ್ಕೆ ಇಂದು ದರ್ಶನ್ ಮತ್ತು ತಂಡ ಸ್ಪಷ್ಟನೆ ನೀಡಲಿದೆ.