ಮೊಹಾಲಿ: ಅಫ್ಘಾನಿಸ್ತಾನ (Afghanistan) ವಿರುದ್ಧದ ಟಿ20 (T20) ಸರಣಿಯ ಮೊದಲ ಪಂದ್ಯದಲ್ಲಿ ಭಾರತ (India) 6 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ಅಫ್ಘಾನಿಸ್ತಾನ ವಿರುದ್ಧದ ಅಜೇಯ ಗೆಲುವಿನ ಸಾಧನೆ ಮುಂದುವರಿದಿದೆ. ಅಫ್ಘಾನಿಸ್ತಾನ ವಿರುದ್ಧ ಇದು ಭಾರತದ ಐದನೇ ಗೆಲುವು.
ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಜನವರಿ 14ರಂದು ಇಂದೋರ್ನಲ್ಲಿ ನಡೆಯಲಿದೆ.
ಮೊಹಾಲಿಯಲ್ಲಿ ಕೊರೆಯುವ ಚಳಿ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಇದು ಭಾರತದ ವಿರುದ್ಧ ಅಫ್ಘಾನಿಸ್ತಾನ ಅತ್ಯಧಿಕ ಮೊತ್ತವಾಗಿದೆ. 159 ರನ್ ಟಾರ್ಗೆಟ್ ಬೆನ್ನತ್ತಿದ ಭಾರತ 17.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಆಫ್ಘನ್ ತಂಡಕ್ಕೆ ಮೊಹಮ್ಮದ್ ನಬಿ 27 ಬಾಲ್ನಲ್ಲಿ 42 ರನ್ ಗಳಿಸಿ, ಟಾಪ್ ಸ್ಕೋರರ್ ಆದರು. ಅಜ್ಮತ್ ಉಲ್ಲ ಒಮರ್ ಝೈ 29 ರನ್ ಗಳಿಸಿದರು. ಭಾರತ ತಂಡದ ಪರವಾಗಿ ಅಕ್ಷರ್ ಪಟೇಲ್ ಹಾಗೂ ಮುಕೇಶ್ ಕುಮಾರ್ 2 ವಿಕೆಟ್ ಗಳಿಸಿದರು.
ಟೀ ಇಂಡಿಯಾ ಪರವಾಗಿ ಶಿವಂ ದುಬೆ ಅಜೇಯ 60 ರನ್ ಗಳಿಸಿ ಗೆಲುವಿನ ರೂವಾರಿಯಾದರು. 40 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 5 ಬೌಂಡರಿ ಬಾರಿಸಿದರು. ಜಿತೇಶ್ ಶರ್ಮಾ 31, ತಿಲಕ್ ವರ್ಮಾ 26, ಶುಭ್ಮನ್ ಗಿಲ್ 23, ರಿಂಕು ಸಿಂಗ್ ಅಜೇಯ 16 ರನ್ ಗಳಿಸಿದರು.