ಬೆಂಗಳೂರು: ಹೆತ್ತ ಮಗುವನ್ನೇ ಕೊಂದ ಪಾಪಿ ತಾಯಿ ಸುಚನಾ ಸೇಠ್ಳ ಮತ್ತಷ್ಟು ರೋಚಕ ವಿಚಾರಗಳು ಪೊಲೀಸರ ತನಿಖೆಯಲ್ಲಿ ರಿವೀಲ್ ಆಗಿದ್ದು, ತನಿಖೆ ವೇಳೆ ಮಗುವನ್ನು (Child) ಕೊಂದಿದ್ದರ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ ಎಂದು ಆರೋಪಿ ಸುಚನಾ ಸೇಠ್ (Suchana Seth) ಹೇಳಿಕೆ ನೀಡಿದ್ದಾಳೆ.
ಮಗುವಿನ ಸಾವಿನ ಬಗ್ಗೆ ತನ್ನ ಪಾತ್ರದ ಬಗ್ಗೆ ಪಶ್ಚಾತ್ತಾಪವಿಲ್ಲ ಎಂದು ಸುಚನಾ ಸೇಠ್ ಹೇಳಿದ್ದಾಳೆ. ಮಗುವನ್ನು ಕೊಲೆ ಮಾಡುವ ಕೆಲವು ದಿನಗಳ ಹಿಂದೆ ಆರೋಪಿ ಸುಚನಾ ಪತಿಗೆ ಕಾಲ್ ಮಾಡಿದ್ದಳು. ಅಲ್ಲದೇ ಜನವರಿ 6ರಂದು ಪತಿ ವೆಂಕಟರಮಣ್ಗೆ ಮೆಸೇಜ್ ಮಾಡಿ ಮರುದಿನ ಮಗುವನ್ನು ಭೇಟಿ ಮಾಡಬಹುದು ಎಂದು ತಿಳಿಸಿದ್ದಳು.
ಹೀಗಾಗಿ ಪತಿ ಮಗುವನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಪತ್ನಿ ಹಾಗೂ ಮಗು ಬೆಂಗಳೂರಿನಲ್ಲಿ ಇಲ್ಲವಾದ್ದರಿಂದ ಭೇಟಿ ಸಾಧ್ಯವಾಗಿರಲಿಲ್ಲ. ಬಳಿಕ ಅದೇ ದಿನ ಪತಿ ವೆಂಕಟರಮಣ್ ಇಂಡೋನೇಷ್ಯಾಗೆ ವಾಪಸ್ಸಾಗಿದ್ದಾರೆ. ಇನ್ನು 2022ರಲ್ಲಿ ಸುಚನಾ ಸೇಠ್ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಳು. ಅಲ್ಲದೇ ನನಗೆ ಮತ್ತು ಮಗುವಿಗೆ ಪತಿ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಳು. ಆದರೆ ಈ ಆರೋಪವನ್ನು ಪತಿ ಅಲ್ಲಗೆಳೆದಿದ್ದರು.
ಇದಾದ ಬಳಿಕ ಪತ್ನಿಯ ಮನೆಯಿಂದ ಮಗು ಮತ್ತು ಆಕೆಯ ಜೊತೆ ಸಂವಹನ ನಡೆಸುವುದನ್ನು ನ್ಯಾಯಾಲಯ ನಿರ್ಬಂಧಿಸಿತ್ತು. ಅದಾಗಿಯೂ ಮಗುವಿನ ಭೇಟಿಯ ಹಕ್ಕನ್ನು ನ್ಯಾಯಾಲಯ ಪತಿಗೆ ನೀಡಿತ್ತು. ಇದು ಸಹಜವಾಗಿಯೇ ನನ್ನ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಮಗುವನ್ನು ಕೊಂದೆ ಎಂದು ಆರೋಪಿ ಸುಚನಾ ಸೇಠ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ.