ಬೆಂಗಳೂರು: ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಸಿಲಿಕಾನ್ ಸಿಟಿ ಪೊಲೀಸರ ಸಮರ ಮುಂದುವರೆದಿದೆ. ಕ್ಯಾಬ್ ಚಾಲಕರ ಸೋಗಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಬಂಧಿಸಿದ್ದಾರೆ.
ವಿಜಯ್ ಕುಮಾರ್, ವಿಜಯ್ ಕುಮಾರ್ ಬಂಧಿತ ಆರೋಪಿಗಳು. ಇಬ್ಬರು ಮೂಲತ: ಯಾದಗಿರಿ, ವಿಜಯಪುರ ಜಿಲ್ಲೆಯವರಾಗಿದ್ದು, ಬೆಂಗಳೂರಿಗೆ ಬಂದು ಕ್ಯಾಬ್ ಓಡಿಸುತ್ತಿದ್ದರು. ಆದರೆ ಹೆಚ್ಚಿನ ಹಣ ಗಳಿಸಬೇಕು, ಐಷಾರಾಮಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಪರಿಚಯಸ್ಥರಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಕಾಲೇಜು ವಿದ್ಯಾರ್ಥಿಗಳು ಐಟಿ/ಬಿಟಿ ಉದ್ಯೋಗಿಗಳಿಗೆ ಟಾರ್ಗೆಟ್ ಮಾಡಿ ಹಣ ಗಳಿಸುತ್ತಿದ್ದರು. ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಹೊಸಕೆರೆ ಹಳ್ಳಿ ಬಳಿ ಕಾರಿನಲ್ಲಿ ಗಾಂಜಾ ಮಾರುತ್ತಿದ್ದಾಗ ದಾಳಿ ನಡೆಸಿ ಈ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 25 ಲಕ್ಷ ಮೌಲ್ಯದ 15 ಕೆಜಿ ಗಾಂಜಾ, ಒಂದು ತೂಕದ ಮೆಶಿನ್, ಎರಡು ಮೊಬೈಲ್, ಒಂದು ಕಾರು ಸೀಜ್ ಮಾಡಿದ್ದಾರೆ.ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಇನ್ನೂ ಇತರೆ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.