ಬೆಂಗಳೂರು:– ಅವೈಜ್ಞಾನಿಕ ಆಸ್ತಿ ತೆರಿಗೆ ಪರಿಷ್ಕರಣೆ ವಾಪಸ್ ಪಡೆಯಿರಿ ಎಂದು DCM ಗೆ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಸ್ವತ್ತುಗಳ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಿ ಕಳೆದ 2016-17ನೆ ಸಾಲಿನಿಂದಲೇ ಪರಿಷ್ಕೃತ ದರವನ್ನು ಪಾವತಿಸುವಂತೆ ಆಸ್ತಿ ಮಾಲಕರಿಗೆ ನೀಡಿರುವ ನೋಟಿಸ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಚಿವ ರಾಮಲಿಂಗಾರೆಡ್ಡಿ, ಈ ಕೂಡಲೇ ಅವೈಜ್ಞಾನಿಕ ಆಸ್ತಿ ತೆರಿಗೆ ಪರಿಷ್ಕರಣೆಯನ್ನು ವಾಪಸ್ ಪಡೆಯುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿ 2016-17ನೆ ಸಾಲಿನಿಂದ ಆಸ್ತಿ ತೆರಿಗೆ ಮೊತ್ತವನ್ನು ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ನೋಟಿಸ್ ನೀಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಅಲ್ಲದೆ, ಬಿಬಿಎಂಪಿ ಆಸ್ತಿ ತೆರಿಗೆ ಪರಿಷ್ಕರಣೆಯನ್ನು ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸದೆ 2016-17 ಸಾಲಿನಿಂದ 7 ವರ್ಷಗಳಿಗೆ ಪರಿಷ್ಕರಣೆ ನೋಟಿಸ್ ಜಾರಿ ಮಾಡಿರುವುದು ಕಂಡುಬಂದಿದೆ.
ಈ ರೀತಿ ಸಾರ್ವಜನಿಕರ ಮೇಲೆ ಒತ್ತಡ ತರುತ್ತಿರುವುದು ಉತ್ತಮವಲ್ಲ. ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ-1976 ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ-2020 ಅನ್ವಯ ಒಮ್ಮಲೇ 7 ವರ್ಷಗಳ ಆಸ್ತಿ ತೆರಿಗೆಯನ್ನು ಪರಿಷ್ಕರಿಸುವುದು ನಿಯಮಬಾಹಿರವಾಗಿರುತ್ತದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಬೆಂಗಳೂರು ಉಸ್ತಿವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರು ಸಭೆ ನಡೆಸಬೇಕು. ಬಿಬಿಎಂಪಿ ವಿಧಿಸುತ್ತಿರುವ ಆಸ್ತಿ ತೆರಿಗೆ ಪರಿಷ್ಕರಣೆ ಕುರಿತು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಹೇಳಿದ್ದಾರೆ.