ಬೆಂಗಳೂರು :ನಾವು ಸತ್ಯ ಹೇಳಿ ರಾಜಕೀಯ ಲಾಭವನ್ನು ಪಡೆಯುವ ಪ್ರಯತ್ನ ಮಾಡಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರ ಸಭೆಯಲ್ಲಿ ಅವರು ಮಾತನಾಡಿದರು.
ಗ್ಯಾರಂಟಿಗಳನ್ನು ಅಪಹಾಸ್ಯ, ಅವಹೇಳನ ಮಾಡಿದವರೇ ಈಗ ಮೋದಿ ಗ್ಯಾರಂಟಿ ಎಂದು ಶುರುಮಾಡಿದ್ದಾರೆ. ನಾವು ಜನರಿಗೆ ಸತ್ಯವನ್ನು ಹೇಳಬೇಕು. ಭಾರತದ ಇತಿಹಾಸದಲ್ಲಿ ಯಾವ ಸರ್ಕಾರವೂ ಈ ರೀತಿಯ ಗ್ಯಾರಂಟಿಗಳನ್ನು ಕಾರ್ಯಕ್ರಮಗಳನ್ನು ಜಾರಿ ಮಾಡಿಲ್ಲ. ಇದರಿಂದ ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಲು ಸಾಧ್ಯವಾಗುತ್ತದೆ. ದಲಿತರು , ಹಿಂದುಳಿದವರು , ಮಹಿಳೆಯರಿಗೆ ಅನುಕೂಲವಾಗಲಿದೆ. ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮೀ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ ಎಂದರು.
ನಮ್ಮವರೇ ಅಪಪ್ರಚಾರ ಮಾಡುವುದನ್ನು ಬಿಡಬೇಕು.
ಸರ್ಕಾರದಲ್ಲಿ ಹಣವಿಲ್ಲ ಎನ್ನುವ ಅಪಪ್ರಚಾರವನ್ನು ಸೋಲಿಸಿ. ಇಷ್ಟು ದೊಡ್ಡ ದೊಡ್ಡ ಕಾರ್ಯಕ್ರಮಗಳು ಹಣವಿಲ್ಲದೆ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದ ಸಿಎಂ, ನಮ್ಮವರೇ ಬಿಜೆಪಿಯವರ ಅಪಪ್ರಚಾರವನ್ನು ಸೋಲಿಸಲು ಮುಂದಾಗಬೇಕು. ಮಾರ್ಚ್ ಒಳಗೆ ಎಲ್ಲಾ ಶಾಸಕರಿಗೆ 25 ಕೋಟಿ ರೂ.ಗಳ ಕೆಲಸ ನೀಡಲು ಸೂಚಿಸಿದ್ದೇನೆ ಎಂದರು.
ಬರಗಾಲ ಪೀಡಿತವಾಗಿದ್ದರೂ ಮೇವಿಗೆ, ಕುಡಿಯುವ ನೀರಿಗೆ ತೊಂದರೆಯಾಗಿಲ್ಲ
ಗ್ಯಾರಂಟಿ ಜಾರಿಯಾಗಿರದಿದ್ದರೆ ಬರಗಾಲದ ಹಾಹಾಕಾರ ಎದ್ದಿರುತಿತ್ತು. ರಾಜ್ಯದ 223 ತಾಲ್ಲೂಕುಗಳು ಬರಗಾಲ ಪೀಡಿತವಾಗಿದ್ದರೂ ಮೇವಿಗೆ, ಕುಡಿಯುವ ನೀರಿಗೆ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ ತೊಂದರೆಯಾಗಿಲ್ಲ ಎಂದರು.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಾವು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ, ಈವರೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಭೆ ಕರೆದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಗೂ ಅಮಿತ್ ಷಾ ಅವರನ್ನು ಭೇಟಿ ಮಾಡಿದಾಗ ಭರವಸೆ ನೀಡಿದ್ದರು. ಕೇಂದ್ರ ಸರ್ಕಾರ ಕೊಡುವವರೆಗೆ ಕಾಯಬಾರದು ಎಂದು 2000 ರೂ ವರೆಗೆ ರೈತರಿಗೆ ಇನ್ ಪುಟ್ ಸಬ್ಸಿಡಿ ಪರಿಹಾರ ಪ್ರಾರಂಭಿಸಲಾಗಿದೆ ಎಂದರು.
ಬಿಜೆಪಿಯವರು ಬರಪರಿಹಾರ ಕೊಟ್ಟಿಲ್ಲ ಎಂದು ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಇವರಿಗೆ ಮರ್ಯಾದೆ ಇದೆಯೇ. 25 ಸಂಸದರು ರಾಜ್ಯದಿಂದ ಇದ್ದರೂ ಒಂದು ದಿನವೂ ಈ ಬಗ್ಗೆ ಮಾತನಾಡಿಲ್ಲ. 15 ನೇ ಹಣಕಾಸಿನ ಆಯೋಗವು 14-15 ನೇ ಸಾಲಿಗೆ 1.07 % ಹಣ ಕಡಿಮೆ ಮಾಡಿದರು. 1ಲಕ್ಷ 66 ಸಾವಿರ ಕೋಟಿ ರೂ.ಗಳು ನಮಗೆ ಬರಬೇಕಿತ್ತು. 15 ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ 5495 ಕೋಟಿ ರೂ.ಗಳನ್ನು ಕೊಡುವುದಾಗಿ ಹೇಳಿ ಕೊಟ್ಟಿಲ್ಲ. ಕರ್ನಾಟಕದ ಬಗ್ಗೆ ಇವರಿಗೆ ಕಾಳಜಿ ಇದೆಯೇ ಎಂದು ಪ್ರಶ್ನಿಸಿದರು. 2018-19 ರಲ್ಲಿ ಕೇಂದ್ರದ ಬಜೆಟ್ ಗಾತ್ರ 23 ಲಕ್ಷ ಕೋಟಿ ರೂ.ಗಳಿತ್ತು . 35 ಸಾವಿರ ಕೋಟಿ ನಮ್ಮ ಪಾಲು ಇತ್ತು. ಈಗ 45 ಲಕ್ಷ ಕೋಟಿ ರೂ.ಗಳಿದ್ದರೂ ನಮಗೆ ಬರುವುದು ಕೇವಲ 37 ಸಾವಿರ ಕೋಟಿ. ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗಿದೆ. ಅವರು ಕೊಡುವುದು ನಮ್ಮ ತೆರಿಗೆಯ ಹಣವನ್ನೇ ಎಂದರು.
ಸೆಸ್ , ಸರ್ಚಾರ್ಜ್, ನಲ್ಲಿ ನಮಗೆ ಪಾಲಿಲ್ಲ. 4 ಲಕ್ಷ ಕೋಟಿ ರೂ.ಗಳನ್ನು ನಮ್ಮ ರಾಜ್ಯದಿಂದ ಸಂಗ್ರಹ ಮಾಡುತ್ತಾರೆ. 52 ಸಾವಿರ ಕೋಟಿ ರೂ ಗಳನ್ನು ಮಾತ್ರ ಕೊಡುತ್ತಾರೆ. ಎಲ್ಲಾ ಶಾಸಕರು, ಸಂಸದರು ಇದನ್ನು ಹೇಳಬೇಕು. ಈ 10 ವರ್ಷಗಳಲ್ಲಿ ನಮಗೆ ದೊಡ್ಡ ಅನ್ಯಾಯವಾಗಿದೆ. ಜಿಎಸ್ ಟಿ ಯಿಂದಾಗುವ ನಷ್ಟವನ್ನು ಭರಿಸುವುದಾಗಿ ಹೇಳಿದ್ದರೂ, ನಮಗೆ ಹಣವನ್ನು ಕೊಟ್ಟಿಲ್ಲ. ರಾಜ್ಯದ ಸಂಸದರೂ ತುಟಿ ಪಿಟಕ್ಕೆನ್ನದೇ ಇದ್ದಾರೆ ಎಂದರು. ಆರ್ಥಿಕವಾಗಿ ಸ್ವಲ್ಪ ಭಾರವಾದರೂ ಗ್ಯಾರಂಟಿಗಳು ಜನರಿಗೆ ಮುಂದಿನ ದಿನಗಳಲ್ಲಿ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬುತ್ತದೆ ಎಂದರು.
ಪಟ್ಟಿ ಕಳಿಸಿ
ಕೇಂದ್ರದಿಂದ ರಾಜ್ಯಕ್ಕಾಗಿರುವ ಅನ್ಯಾಯಗಳ ಬಗ್ಗೆ ಶಾಸಕರಿಗೆ ಪಟ್ಟಿ ಕಳಿಸಿಕೊಟ್ಟು ಇದನ್ನು ಜನರಿಗೆ ತಲುಪಿಸಬೇಕು. ಜನರಿಗೆ ನಮ್ಮ ಗ್ಯಾರಂಟಿಗಳನ್ನು ತಲುಪಿಸಬೇಕು ಎಂದರು.