ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ಪೂರೈಸುತ್ತಾರಾ? ಎಂಬ ಪ್ರಶ್ನೆಗೆ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಯಾಕೆ 5 ವರ್ಷ ಪೂರೈಸಬಾರದು? ಹೈಕಮಾಂಡ್, ಶಾಸಕರ ಬೆಂಬಲ ಇರೋವರೆಗೂ ಅವರು ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ.
ಇವತ್ತಿನ ಸಭೆಯಲ್ಲಿ ಮೂವರು ಡಿಸಿಎಂ ವಿಚಾರ ಪ್ರಸ್ತಾಪ ಮಾಡಲ್ಲ. ನಾಳೆ ದೆಹಲಿಯಲ್ಲಿ ಪರಿಸ್ಥಿತಿ ನೋಡಿ ಮುಂದುವರಿಯಲಾಗುವುದು. ಅವರು ಯಾವ ವಿಚಾರಕ್ಕೆ ಸಭೆ ಕರೆದಿದ್ದಾರೆ ಅನ್ನೋದರ ಮೇಲೆ ಡಿಸಿಎಂ ವಿಚಾರ ಪ್ರಸ್ತಾಪ ಮಾಡಬೇಕೋ? ಬೇಡವೋ? ಅನ್ನೋದು ನಿರ್ಧಾರವಾಗುತ್ತದೆ. ಈಗಾಗಲೇ ಸುರ್ಜೆವಾಲರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.
ಹೆಚ್ಚುವರಿ ಡಿಸಿಎಂ ಆದಾಕ್ಷಣ ಯಾರೂ ಯಾರ ಪೋರ್ಟ್ ಪೋಲಿಯೋ ಕಿತ್ತುಕೊಳ್ಳಲ್ಲ. ಹೆಚ್ಚುವರಿ ಡಿಸಿಎಂ ಆದರೆ ಡಿಕೆಶಿ ಅವರ ಪೋರ್ಟ್ ಪೋಲಿಯೋ ಯಾರಾದರೂ ಕಿತ್ತುಕೊಳ್ತಾರಾ? ಮೂವರು ಡಿಸಿಎಂಗೆ ಯಾವ ಶಾಸಕರೂ ವಿರೋಧ ಮಾಡಿಲ್ಲ. ತುಂಬಾ ಜನ ಮೌನವಾಗಿದ್ದಾರೆ. ಮೌನಂ ಸಮ್ಮತಿ ಲಕ್ಷಣ ಅಲ್ವಾ? ಎಂದು ಸಚಿವ ರಾಜಣ್ಣ ಪ್ರಶ್ನಿಸಿದ್ದಾರೆ.