ಕನ್ನಡದ ಹೆಸರಾಂತ ನಟ ದರ್ಶನ್ ಸದ್ಯ ದುಬೈನಲ್ಲಿದ್ದಾರೆ. ಅವರ ನಟನೆಯ ಕಾಟೇರ ಸಿನಿಮಾ ದುಬೈನಲ್ಲೂ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಿ ದರ್ಶನ್ ಕುರಿತಂತೆ ನಾನಾ ಬೆಳವಣಿಗೆಗಳು ನಡೆಯುತ್ತಿದೆ. ಎರಡನ್ನೂ ಮಿಕ್ಸ್ ಮಾಡಿ ಎಕ್ಸ್ (ಟ್ವೀಟ್) ವೊಂದನ್ನು ಮಾಡಿದ್ದಾರೆ ದರ್ಶನ್.
‘ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ
ದೇಶ ವಿದೇಶಗಳಲ್ಲಿ ಕಾಟೇರ ಗೆಲುವು ಸಾಧಿಸುತ್ತಿದ್ದರೆ, ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅತೀ ಶೀಘ್ರದಲ್ಲೇ ಕಾಟೇರ ಸಿನಿಮಾವನ್ನು ಕಿಚ್ಚ ಸುದೀಪ್ (Sudeep) ನೋಡಲಿದ್ದಾರಂತೆ. ಸೆಲೆಬ್ರಿಟಿ ಶೋಗೆ ಬರುವಂತೆ ಸುದೀಪ್ ಅವರಿಗೆ ಕಾಟೇರ ತಂಡದಿಂದ ಕರೆ ಹೋಗಿತ್ತು. ಕಿಚ್ಚ ಶೂಟಿಂಗ್ ನಲ್ಲಿ ಇರುವ ಕಾರಣದಿಂದಾಗಿ ಬರುವುದಕ್ಕೆ ಆಗಿರಲಿಲ್ಲ. ಆದರೆ ಅತೀ ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಸುದೀಪ್ ಹೇಳಿದ್ದಾರೆ ಎನ್ನುವುದು ಸದ್ಯದ ವರ್ತಮಾನ.
ಒಂದು ಕಡೆ ಸೆಲೆಬ್ರಿಟಿಗಳು ಚಿತ್ರವನ್ನು ನೋಡಿ ಹೊಗಳುತ್ತಿದ್ದರೆ, ಮತ್ತೊಂದು ಕಡೆ ಕಾಟೇರ ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಕುರಿತಂತೆ ದರ್ಶನ್ (Darshan) ಅಭಿಮಾನಿಗಳು ಪೋಸ್ಟ್ ಮಾಡಿದ್ದು, ‘ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ಮತ್ತು ಕರುನಾಡೆ ಮೆಚ್ಚಿದ ನಮ್ಮ ಕಾಟೇರ ಕೇವಲ ಒಂದು ವಾರದಲ್ಲಿ, 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿ, 104 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.