ಬೆಂಗಳೂರು: ಬಂಕ್ಗಳಲ್ಲಿ ಪೆಟ್ರೋಲ್, ಡೀಸೆಲ್ (Petrol, Diesel) ದರ ಪಟ್ಟಿ ಕನ್ನಡದಲ್ಲೂ ಇರಲಿದೆ. ಇಂದಿನಿಂದಲೇ ಕನ್ನಡದಲ್ಲಿ ಪ್ರದರ್ಶಿಸಲು ಸೂಚಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ.
ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಕ್ಗಳಲ್ಲಿ ಪೆಟ್ರೋಲ್ ಬೆಲೆ (Fuel Prices) ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಇದ್ದು, ಕನ್ನಡದಲ್ಲಿ ನೀಡಬೇಕು ಎಂಬ ಮನವಿ ಇದೆ. ಇಂಧನ ಬೆಲೆಗಳನ್ನು ಕನ್ನಡದಲ್ಲಿ ಪ್ರದರ್ಶಿಸಬೇಕು ಎಂಬ ಬೇಡಿಕೆಯಿತ್ತು. ನಾಳೆಯಿಂದ ಕನ್ನಡದಲ್ಲಿ ಲಭ್ಯವಿರುತ್ತದೆ ಎಂದು ನಾನು ತಕ್ಷಣ ಘೋಷಿಸಿದೆ. ತೈಲ ಕಂಪನಿಗಳಿಗೆ ಕನ್ನಡದಲ್ಲಿ ಪ್ರದರ್ಶಿಸುವ ಬೆಲೆಗಳನ್ನು ಹೊಂದಿರಬೇಕು ಎಂದು ಸೂಚಿಸಲು ನನ್ನ ಸಹೋದ್ಯೋಗಿಗಳಿಗೆ ಹೇಳಿದ್ದೇನೆ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಕರ್ನಾಟಕದಲ್ಲಿ ಇದ್ದೇನೆ. ಹಾಸನ, ಬೇಲೂರಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಕೇಂದ್ರದ ಯೋಜನೆಗಳಿಗೆ ಇಲ್ಲಿ ಉತ್ತಮ ಸ್ಪಂದನೆ ಇದೆ. ಕೇಂದ್ರದ ಬಹಳಷ್ಟು ಯೋಜನೆಗಳು ಮಹಿಳಾ ಕೇಂದ್ರಿತವಾಗಿವೆ. ಅನೇಕ ಮಹಿಳೆಯರು ಫಲಾನುಭವಿಗಳಾಗಿ ಕೇಂದ್ರದ ಯೋಜನೆಗಳ ಸೌಲಭ್ಯ ಪಡೆಯುತ್ತಿದ್ದಾರೆ ಎಂದಿದ್ದಾರೆ.