ದಾವಣಗೆರೆ: ಮಾಸಾಶನ ಪಡೆಯಲು ವೃದ್ಧೆಯೊಬ್ಬರು ತೆವಳಿಕೊಂಡು ಪೋಸ್ಟ್ ಆಫೀಸ್ಗೆ ಬಂದ ಅಮಾನವೀಯ ಘಟನೆ ಹರಿಹರದಲ್ಲಿ ನಡೆದಿದೆ.
ಕುಣೆಬೆಳಕೆರೆ ಪೋಸ್ಟ್ ಆಫೀಸ್ನಿಂದ ವೃದ್ದೆಗೆ ಮಾಸಾಶನ ಬರುತ್ತಿತ್ತು. ಆದರೆ, ಕಳೆದ ಎರಡು ತಿಂಗಳುಗಳಿಂದ ಮಾಸಾಶನ ವೃದ್ಧೆಯ ಕೈಸೇರಿಲ್ಲ. ಈ ಬಗ್ಗೆ ಪೋಸ್ಟ್ ಮ್ಯಾನ್ ಬಳಿ ವಿಚಾರಿಸಿದಾಗ 2 ತಿಂಗಳುಗಳಿಂದ ಹಣ ಬಂದಿಲ್ಲ ಎಂದು ಹೇಳಿದ್ದರು. ಮಕ್ಕಳಿಲ್ಲದ ವೃದ್ಧೆಗೆ ಮಾಸಾಶನವೇ ಜೀವನಾಧಾರವಾಗಿತ್ತು. ಹೀಗಾಗಿ ವೃದ್ದೆ ಗಿರಿಜಮ್ಮ ಮಾಸಾಶನದ ಕುರಿತು ವಿಚಾರಿಸಲು 2 ಕಿಮೀ ತೆವಳಿಕೊಂಡು ಕುಣಿಬೆಳೆಕೆರೆ ಗ್ರಾಮದ ಪೋಸ್ಟ್ ಆಫೀಸ್ಗೆ ಆಗಮಿಸಿದ್ದಾರೆ. ಮಾಸಾಶನ ಪಡೆಯಲು ತೆವಳಿಕೊಂಡು ಬಂದಿದ್ದರಿಂದ ಅಜ್ಜಿಗೆ ಕಾಲಲ್ಲಿ ಬೊಬ್ಬೆಗಳೆದ್ದಿವೆ. ಇದರಿಂದ ಎಚ್ಚೆತ್ತ ಗ್ರಾಮ ಪಂಚಾಯಿತಿ ಅಧಿಕಾರಿಗಳು ವೃದ್ಧೆಯನ್ನು ಹರಿಹರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ಕುರಿತು ವೃದ್ದೆ ಗಿರಿಜಮ್ಮ ಮಾತನಾಡಿ, “ಮಸಾಶನದ ಬಗ್ಗೆ ವಿಚಾರಿಸಲು ಬೆಳಗ್ಗೆ 8 ಗಂಟೆಗೆ ನಂದಿತಾವರೆ ರೇಣುಕಾ ಕ್ಯಾಂಪ್ನಿಂದ ಹೊರಟು ಸಂಜೆ 4 ಗಂಟಗೆ ಕುಣೆಬೆಳೆಕೆರೆಯ ಪೋಸ್ಟ್ ಆಫೀಸ್ಗೆ ತಲುಪಿದೆ. ನನಗೆ ಎರಡು ತಿಂಗಳಿನಿಂದ ಮಾಸಾಶನ ಬಂದಿಲ್ಲ. ಈ ಬಗ್ಗೆ ಪೋಸ್ಟ್ ಮ್ಯಾನ್ ಬಳಿ ಕೇಳಿದರೆ ಹಣ ಬಂದಿಲ್ಲ ನಡಿ ಎಂದು ಗದರಿಸಿ ಕಳುಹಿಸುತ್ತಾನೆ. ನನ್ನ ಮೃತ ಪತಿಯ 10 ಸಾವಿರ ರೂಪಾಯಿ ಹಣ ಬರಬೇಕಿತ್ತು ಅದನ್ನು ಕೊಟ್ಟಿಲ್ಲ. ಆಟೋಗೆ ಹಣ ಇಲ್ಲದ ಕಾರಣ ತೆವಳಿಕೊಂಡು ಬಂದಿದ್ದೇನೆ. ನನಗೆ ಮಕ್ಕಳು ಯಾರೂ ಇಲ್ಲ” ಎಂದು ಅಳಲು ತೊಡಿಕೊಂಡರು.