ಶಿಡ್ಲಘಟ್ಟ: ಪ್ರಧಾನಿ ನರೇಂದ್ರ ಮೋದಿ ಬಡವರ ಉನ್ನತಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಶೀಕಲ್ ಆನಂದ ಗೌಡ ತಿಳಿಸಿದರು.
ತಾಲ್ಲೂಕಿನ ಪಲ್ಲಿಚೆರ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ರಥ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶದ ಎರಡು ಲಕ್ಷಕ್ಕೂ ಅಧಿಕ ಗ್ರಾಮ ಪಂಚಾಯತಿಗಳಿಗೆ ರಥವು ತಲುಪಲಿದ್ದು, ಅದಕ್ಕಾಗಿ ಸುಮಾರು ಹತ್ತು ಸಾವಿರ ರಥಗಳನ್ನು ಸಿದ್ದಪಡಿಸಲಾಗಿದೆ ಎಂದರು. ಗ್ರಾಮೀಣ ಪ್ರದೇಶದ ಪ್ರತಿ ಕಟ್ಟಕಡೆಯ ನಾಗರೀಕರಿಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸು ಉದ್ದೇಶದಿಂದ ರಥ ಯಾತ್ರೆ ಪ್ರಾರಂಭಿಸಿಲಾಗಿದೆ ಎಂದರು.
ಜಲಜೀವನ್ ಮಿಶನ್ ಅಡಿಯಲ್ಲಿ ಹರ್ ಘರ್ ಜಲ್ ಕಾರ್ಯಕ್ರಮ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಹತ್ತು ಸಾವಿರ ರೂ. ನೇರ ಸಾಲ, ಆರೋಗ್ಯ ವಿಮೆ, ಕೃಷಿ ವಿಮೆ, ಮಹಿಳೆಯರಿಗೆ ಕೌಶಲ್ಯ ತರಬೇತಿ ಹಾಗು ಉದ್ದಿಮೆ ಸ್ಥಾಪನೆಗೆ ಸಾಲ, ಹೀಗೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು, ಗ್ರಾಮೀಣ ಭಾಗದ ಜನರು ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ತಿಳಿಸಿದರು.
ಬ್ಯಾಂಕ್ ಆಫ್ ಬರೋಡಾ ಅಬ್ಲೂಡು ಶಾಖೆಯ ವ್ಯವಸ್ಥಾಪಕ ಕಿರಣ್ ಕುಮಾರ್ ಮಾತನಾಡಿ ರೈತರ ಬೆಳೆ ವಿಮೆ(ಪಿಎಂ ಕಿಸಾನ್) ಕೆಸಿಸಿ, ಸ್ತ್ರೀ ಶಕ್ತಿ ಸಂಘಗಳ ಸಾಲ, ಪಿಎಂ ಎಸ್ ಪಿ ವೈ, ಹಾಗು ನೂತನವಾಗಿ ಪ್ರಾರಂಭವಾಗಿರುವ ವಿಶ್ವ ಕರ್ಮ ಯೋಜನೆಯ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು. ತಾಲ್ಲೂಕು ಮಟ್ಟದ ಅಧಿಕಾರಿಗಳು ಆಯಾ ಇಲಾಖೆಗೆ ಸಂಬಂಧಿಸಿದಂತೆ ಜಾರಿ ಇರುವ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅದ್ಯೆಕ್ಷೆ ಲಕ್ಷ್ಮಿ ದೇವಮ್ಮ, ಉಪಾಧ್ಯಕ್ಷೆ ಮೀನಾ, ಪಿಡಿಒ ರಮೇಶ್, ಗ್ರಾಮ ಪಂ ಸದಸ್ಯರಾದ ದೇವರಾಜ್, ಲಕ್ಷ್ಮೀ ನಾರಾಯಣ, ರಾಮಚಂದ್ರಪ್ಪ, ಮುಖಂಡರಾದ ಸುರೇಂದ್ರಗೌಡ, ಸೋಮ ಶೇಖರ್ ಇನ್ನಿತರರು ಉಪಸ್ಥಿತರಿದ್ದರು.