ಧಾರವಾಡ: ಸಿದ್ದರಾಮಯ್ಯನವರ ಸರ್ಕಾರವನ್ನು ಐಸಿಸ್ ಗೆ ಹೋಲಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಡೆ ಖಂಡಿಸಿ ಹಾಗೂ ರಾಜೀನಾಮೆ ಅಗ್ರಹಿಸಿ, ಧಾರವಾಡದಲ್ಲಿ ಕಾಂಗ್ತೆಸ್ ನಾಯಕರು ಸೇರಿ ಕಾರ್ಯಕರ್ತರು ಪ್ರತಿಭಟನೆ ಮಾಡಿ ಜೋಶಿಯವರ ವಿರುದ್ಧ ಆಕ್ರೋಶ ಹೊರಹಾಕಿದರು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಹಾಗೂ ಹುಬ್ಬಳ್ಳಿ ಧಾರವಾಡ ಮಾಹಾನಗರ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ, ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ ಕೈ ನಾಯಕರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರ ಸೇರಿದಂತೆ ಕೇಂದ್ರ ಸಚಿವ ಒ್ರಹ್ಲಾದ್ ಜೋಶಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ ಸಂತೋಷ್ ಲಾಡ್, ಜೋಶಿ ಅವರ ವಿರುದ್ಧ ಇಂದಿನಿಂದ ಪ್ರತಿಭಟನೆಗಳು ನಡೆಯಲಿವೆ. ಧಾರವಾಡ ಕ್ಷೇತ್ರ ಬುದ್ಧಿಜೀವಿಗಳ, ಪ್ರಗತಿಪರರ ಕ್ಷೇತ್ರ. ಇಂತಹ ಕ್ಷೇತ್ರವನ್ನು ಜೋಶಿ ಪ್ರತಿನಿಧಿಸುತ್ತಿದ್ದಾರೆ. ಜೋಶಿ ಅವರ ಬಗ್ಗೆ ವೈಯಕ್ತಿಕವಾಗಿ ನನಗೆ ಗೌರವವಿದೆ. ಆದರೆ, ಅವರು ಸಿದ್ದರಾಮಯ್ಯನವರ ಸರ್ಕಾರವನ್ನು ಐಸಿಸ್ ಆಡಳಿತಕ್ಕೆ ಹೋಲಿಸಿದ್ದಾರೆ. ಇದು ಧಾರವಾಡ ಜನತೆಗೆ ಅಗೌರವ ತೋರಿದಂತೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಮಾಡಬಹುದು. ಆದರೆ, ತಾಲಿಬಾನ್, ಅಫ್ಘಾನಿಸ್ತಾನ ಆಡಳಿತಕ್ಕೆ ಹೋಲಿಕೆ ಮಾಡಿ ಟೀಕೆ ಮಾಡುವುದು ಸರಿಯಲ್ಲ. ಕೂಡಲೇ ಅವರು ತಮ್ಮ ಹೇಳಿಕೆಯನ್ನು ವಾಪಾಸ್ ಪಡೆಯಬೇಕು ಎಂದು ಲಾಡ್ ಆಗ್ರಹಿಸಿದರು.
ಸಚಿವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಅನೇಕ ಕಾಂಗ್ರೆಸ್ ಮುಖಂಡರು ಪಾಲ್ಗೊಂಡು ಕೇಂದ್ರ ಸಚಿವ ಜೋಶಿ ವಿರುದ್ಧ ಧಿಕ್ಕಾರ ಕೂಗಿದರು. ಅಲ್ಲದೇ ಜೋಶಿ ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.