ದಾವಣಗೆರೆ: ಭದ್ರಾ ನೀರನ್ನು ಸಮರ್ಪಕವಾಗಿ ಹರಿಸದ ಐಸಿಸಿ ನಿರ್ಣಯ ಖಂಡಿಸಿ ಜ.10ರಂದು ಜಿಲ್ಲಾ ರೈತ ಒಕ್ಕೂಟವು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಹಳ್ಳಿ ಹಳ್ಳಿಗಳಿಗೆ ತೆರಳಿ ದಾವಣಗೆರೆ ಲೋಕಸಭೆಯ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ. ಬಿ. ಕೊಟ್ರೇಶ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಜನರಲ್ಲಿ ಮನವಿ ಮಾಡಿದರು.
ಜ.10ರಂದು ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಪಿ. ಬಿ.ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಜಮಾವಣೆಗೊಳ್ಳಬೇಕು. ರೈತರು, ಭದ್ರಾ ನೀರು ಬಳಕೆ ಮಾಡುವವರು ಈ ಪ್ರತಿಭಟನೆಗೆ ಬನ್ನಿ. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸೋಣ. ಐಸಿಸಿ ಸಭೆ ನಿರ್ಣಯ ಬದಲಾಯಿಸುವವರೆಗೆ ಹೋರಾಟ ಮಾಡೋಣ ಎಂದು ಕೆ. ಬಿ. ಕೊಟ್ರೇಶ್ ಮನವಿ ಮಾಡುತ್ತಿದ್ದಾರೆ.
ಜಿಲ್ಲೆಯ 28 ಹಳ್ಳಿಗಳಿಗೆ ತೆರಳಿ ಪ್ರತಿಭಟನೆಯಲ್ಲಿ ರೈತರು ಭಾಗವಹಿಸುವಂತೆ ಮನವಿ ಮಾಡಿದರು. ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶ ಇರುವುದು ದಾವಣಗೆರೆ ಜಿಲ್ಲೆಯಲ್ಲಿ. ಎಲ್ಲಾ ರೈತರು ಸಂಘಟಿತರಾಗಿ, ಒಗ್ಗಟ್ಟಾಗಿ ಹೋರಾಟ ಮಾಡಿದರೆ ಸರ್ಕಾರದ ಗಮನ ಸೆಳೆಯಬಹುದು. ಹಾಗಾಗಿ, ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಕುಂದೂರು, ಕೂಲಂಬಿ ಸೇರಿದಂತೆ ಇತರೆ ಹಳ್ಳಿಗಳಿಗೆ ಕೆ. ಬಿ. ಕೊಟ್ರೇಶ್ ತೆರಳಿ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಿದ್ದು, ಉಳಿದ ತಂಡಗಳು ಬೇರೆ ಗ್ರಾಮಗಳಿಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ.