ಮುಂಬೈ: ನೀನು ನೋಡಲು ಹಾಟ್ ಆ್ಯಂಡ್ ಸೆಕ್ಸಿಯಾಗಿದ್ದೀಯಾ, ಒಂದು ದಿನ ರಾತ್ರಿ ನನ್ನ ಜೊತೆ ಕಳೆದ್ರೆ ನಾನು ನಿನ್ನ ಎಲ್ಲ ಕನಸುಗಳನ್ನು ಪೂರ್ಣ ಮಾಡುತ್ತೇನೆ ಎಂದು ಹೇಳುವ ಮೂಲಕ ಮ್ಯಾನೇಜರ್ ಒರ್ವ ತನ್ನ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ನಗರದ ಅಂಧೇರಿಯ ಮಲ್ಟಿ-ಕ್ರೋರ್ ಡೈಮಂಡ್ ಫರ್ಮ್ನ ಮ್ಯಾನೇಜರ್ ಕಂಪನಿಯಲ್ಲಿ ಕೆಲಸ ಮಾಡುವ 19 ವರ್ಷದ ಯುವತಿಗೆ ಸೆಕ್ಸ್ ಗೆ ಆಹ್ವಾನ ನೀಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದ್ದು, ನಗರದ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಫರ್ಮ್ ಮಾಲೀಕ ಮತ್ತು ಮ್ಯಾನೇಜರ್ ವಿರುದ್ಧ ದೂರು ದಾಖಲಾಗಿದೆ.
ಓವರ್ ಟೈಮ್ ವರ್ಕ್: ನಾನು ಓವರ್ ಟೈಮ್ ವರ್ಕ್ ಮಾಡುತ್ತಿದ್ದೆ. ಈ ವೇಳೆ ಆಫೀಸ್ನಲ್ಲಿ ಮ್ಯಾನೇಜರ್ ಮತ್ತು ಕೆಲ ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದರು. ಸಂಜೆ ಸುಮಾರು 5.45ರ ವೇಳೆಗೆ ಸೆಕ್ಯೂರಿಟಿ ಗಾರ್ಡ್ ನನ್ನ ಬಳಿ ಬಂದು ನಿಮ್ಮನ್ನು ಮ್ಯಾನೇಜರ್ ಕರೆದಿದ್ದಾರೆ ಎಂದು ತಿಳಿಸಿದ. ಸ್ಟೋರ್ ರೂಮ್ನಲ್ಲಿದ್ದ ಮ್ಯಾನೇಜರ್ ಬಳಿ ನಾನು ತೆರಳಿ, ಕರೆಸಿರುವ ಕಾರಣ ಕೇಳಿದೆ. ಮೊದಲಿಗೆ ಆಫೀಸ್ಗೆ ಸಂಬಂಧಿಸಿದ ವಿಚಾರವಾಗಿ ಕೇಳಿದರು.
ಆಫೀಸ್ಗೆ ಸಂಬಂಧಿಸಿದ ವಿಷಯಗಳು ಮುಗಿದ ಮೇಲೆ ನನ್ನನ್ನು ಕೆಳಗಿನಿಂದ ಮೇಲಿನವರೆಗೂ ಅತ್ಯಂತ ಕೆಟ್ಟ ದೃಷ್ಟಿಯಲ್ಲಿ ನೋಡಲು ಆರಂಭಿಸಿದರು. ನೀನು ನೋಡಲು ತುಂಬಾ ಸುಂದರವಾಗಿದ್ದೀಯಾ, ಒಂದು ದಿನ ರಾತ್ರಿ ನನ್ನ ಜೊತೆ ಕಳೆದರೆ ನಿನ್ನ ಆಸೆ ಮತ್ತು ಕನಸುಗಳನ್ನೆಲ್ಲಾ ಪೂರ್ಣ ಮಾಡುತ್ತೇನೆ. ನೀನು ತುಂಬಾ ತೆಳ್ಳಗಿದ್ದೀಯಾ, ಹಾಗಾಗಿ ನಾನು ನಿನ್ನನ್ನು ಹೆಲ್ದಿಯಾಗಿ ಮಾಡುತ್ತೇನೆ ಎಂದು ಕಾಮದ ದೃಷ್ಟಿಯಿಂದ ಮಂಚಕ್ಕೆ ಆಹ್ವಾನಿಸಿದ್ದಾನೆ ಎಂದು ಯುವತಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ಯುವತಿಗೆ ಬೆದರಿಕೆ: ಮ್ಯಾನೇಜರ್ ವರ್ತನೆಯನ್ನು ನೋಡಿದ ನನಗೆ ಶಾಕ್ ಆಗಿತ್ತು. ಈ ವಿಷಯವನ್ನು ಯಾರಿಗಾದ್ರೂ ತಿಳಿಸಿದರೆ ನಿನಗೆ ಎಲ್ಲಿಯೂ ಉದ್ಯೋಗ ಸಿಗದಂತೆ ಮಾಡುತ್ತೇನೆ ಎಂದು ನನಗೆ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮ್ಯಾನೇಜರ್ನ ಬೆದರಿಕೆಯ ಮಾತುಗಳನ್ನು ಕೇಳಿದ ಯುವತಿ ಸಂಪೂರ್ಣ ಭಯಗೊಂಡು, ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದಲ್ಲಿ ತನಗೆ ಆಗಿರುವ ದೌರ್ಜನ್ಯವನ್ನು ಹೇಳಿಕೊಂಡಿದ್ದರು. ಹೆಚ್.ಆರ್. ಅಧಿಕಾರಿಗಳು ಕಂಪನಿಯ ವಿಶಾಖಾ ಕಮಿಟಿಯಲ್ಲಿ ದೂರು ದಾಖಲಿಸುವಂತೆ ಸಲಹೆ ನೀಡಿದ್ದಾರೆ.
ನನ್ನನ್ನು ಯಾರು ಮುಟ್ಟಲ್ಲ: ಹಿರಿಯ ಅಧಿಕಾರಿಗಳ ಸಲಹೆಯ ಮೇರೆಗೆ ಯುವತಿ ವಿಶಾಖಾ ಕಮಿಟಿ ದೂರು ದಾಖಲಿಸಿ, ಕಂಪನಿಯ ಮಾಲೀಕರನ್ನು ಭೇಟಿಯಾಗಿ ವಿಷಯವನ್ನು ತಿಳಿಸಿದ್ದಾರೆ. ಆದರೆ ಕಂಪನಿಯ ಮಾಲೀಕ ಯುವತಿಯ ಮೇಲೆ ಕಿರುಚಾಡಿ, ದೂರು ನೀಡದಂತೆ ಬೆದರಿಕೆ ಹಾಕಿದ್ದಾನೆ. ಒಂದು ವೇಳೆ ನೀನು ದೂರು ನೀಡಿದ್ರೂ ಯಾರು ಸಹ ನನಗೆ ಏನೂ ಮಾಡಲ್ಲ. ನಾನೊಬ್ಬ ಪ್ರಭಾವಶಾಲಿ ವ್ಯಕ್ತಿಯಾಗಿದ್ದೇನೆ ಎಂದು ಹೇಳಿ ಕಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.