ಬೆಂಗಳೂರು: ಲಕ್ಷದ್ವೀಪಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದನ್ನು ಮಾಲ್ಡೀವ್ಸ್ ವ್ಯಂಗ್ಯವಾಡಿದ್ದು, ಈ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭವಾಗಿದೆ. ಈ ಬೆನ್ನಲ್ಲೇ ಕ್ರಿಕೆಟಿಗರು ಸೇರಿ ಹಲವರು ಈ ಕ್ಯಾಂಪೇನ್ನಲ್ಲಿ ಪಾಲ್ಗೊಂಡು ಮೋದಿ ಬೆಂಬಲಕ್ಕೆ ನಿಂತಿದ್ದಾರೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಅವರು ಭಾರತದ ಸುಂದರ ಬೀಚ್ಗಳ ಫೋಟೋಗಳನ್ನು (Beach Photo) ಶೇರ್ ಮಾಡಿದ್ದಾರೆ. ಇದರಲ್ಲಿ ಉಡುಪಿ ಜಿಲ್ಲೆಯ ಮರವಂತೆ ಬೀಚ್ ನ ಫೋಟೋಗಳು ಕೂಡ ಇದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ
ʼಸೆಹ್ವಾಗ್ ಹೇಳಿದ್ದೇನು..?: ನಮ್ಮಲ್ಲಿ ಮಾಲ್ಡೀವ್ಸ್ಗಿಂತ ಸುಂದರ ಬೀಚ್ಗಳಿವೆ. ಉಡುಪಿ, ಪುದುಚ್ಚೆರಿ, ಅಂಡಮಾನ್-ನಿಕೋಬಾರ್ ನ ದ್ವೀಪಗಳ ಜೊತೆಗೆ ಅದೆಷ್ಟೋ ಸುಂದರ ತಾಣಗಳಿವೆ. ಮೂಲಭೂತ ಸೌಕರ್ಯ ಕಲ್ಪಿಸಿದಲ್ಲಿ ಇವುಗಳು ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸಲಿವೆ. ಆಪತ್ತಿನಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಸಮಯ ಬಂದಿದೆ. ನಮ್ಮ ಪ್ರಧಾನಿ ಬಗ್ಗೆ ಅನುಚಿತ ಹೇಳಿಕೆ ಕೊಟ್ಟ ಮಾಲ್ಡೀವ್ಸ್ ಮಂತ್ರಿಗಳಿಗೆ ಈ ರೀತಿಯಾಗಿ ತಿರುಗೇಟು ಕೊಡೋಣ ಎಂದು ಕರೆ ನೀಡಿದ್ದಾರೆ. ಇರ್ಫಾನ್ ಖಾನ್, ಸುರೇಶ್ ರೈನಾ ಸೇರಿ ಹಲವರು ಎಕ್ಸ್ ಮಾಡಿದ್ದಾರೆ.
ಸೆಹ್ವಾಗ್ ಅವರ ಈ ಪೋಸ್ಟ್ಗೆ ಎಕ್ಸ್ ಬಳಕೆದಾರರೊಬ್ಬರು ಉಡುಪಿ ಕುಂದಾಪುರಕ್ಕೆ ಯಾವತ್ತಾದರೂ ಭೇಟಿ ನೀಡಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೆಹ್ವಾಗ್ ಹೌದು, ಉಡುಪಿ ನಿಜಕ್ಕೂ ಅದ್ಬುತ. ಪ್ರಾಚೀನ ಕಡಲತೀರಗಳು, ದೇವಾಲಯ ಮತ್ತು ಅದ್ಭುತ ಆಹಾರಗಳಿವೆ ಎಂದು ಕರಾವಳಿ ಜಿಲ್ಲೆಯನ್ನು ಹೊಗಳಿದ್ದಾರೆ.