ಭೋಪಾಲ್: ಹಣೆಯ ಮೇಲೆ ಪಟ್ಟೆ ವಿಭೂತಿ ಹಚ್ಚಿ, ಧೋತಿ-ಕುರ್ತಾ ಧರಿಸಿದ್ದ ವೈದಿಕ ಪಂಡಿತರು ಕ್ರಿಕೆಟ್ (Cricket) ಅಂಗಳದಲ್ಲಿ ಬ್ಯಾಟ್ ಹಿಡಿದು ಅಬ್ಬರಿಸುತ್ತಿದ್ದರು. ವೇದ-ಪಾರಾಯಣಗಳೊಂದಿಗೆ ಕಾಲ ಕಳೆಯುತ್ತಿದ್ದ ಪಂಡಿತರಿಂದು ಉತ್ಸಾಹದಿಂದ ಗ್ರೌಂಡ್ನಲ್ಲಿ ಸಿಕ್ಸರ್-ಬೌಂಡರಿ ಸಿಡಿಸುತ್ತಾ ಕ್ರಿಕೆಟ್ ಅಭಿಮಾನಿಗಳಿಂದ ಮೆಚ್ಚುಗೆಯನ್ನೂ ಪಡೆದರು.. ಈ ದೃಶ್ಯ ಕಂಡುಬಂದಿದ್ದು ಭೋಪಾಲ್ನ ಅಂಕುರ್ ಮೈದಾನದಲ್ಲಿ (Ankur Ground) ನಡೆಯುತ್ತಿರುವ ಕ್ರಿಕೆಟ್ ಟೂರ್ನಿಯಲ್ಲಿ.
ಸಂಸ್ಕೃತದಲ್ಲೇ ಕಾಮೆಂಟ್ರಿ: ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಟೂರ್ನಿಯಲ್ಲಿ ಆಟಗಾರರು ಮತ್ತು ಅಂಪೈರ್ಗಳು ನಿರರ್ಗಳವಾಗಿ ಸಂಸ್ಕೃತದಲ್ಲಿ ಸಂವಹನ ನಡೆಸಿದರು. ಅಲ್ಲದೇ ಮೈದಾನದಲ್ಲಿ ಆಟಗಾರರ ಸಿಕ್ಸರ್, ಬೌಂಡರಿಗಳಿಗೆ ಸಂಸ್ಕೃತದಲ್ಲೇ ಕಾಮೆಂಟ್ರಿ ಮಾಡುತ್ತಾ ಗಮನ ಸೆಳೆದರು.
ಅಯೋಧ್ಯೆ ಟ್ರಿಪ್ ಬಹುಮಾನ:
ಮಹರ್ಷಿ ಮೈತ್ರಿ ಪಂದ್ಯ ಸಮಿತಿಯ ಸದಸ್ಯ ಅಂಕುರ್ ಪಾಂಡೆ ಅವರು ಹೇಳುವಂತೆ ಈ ಟೂರ್ನಿಯಲ್ಲಿ ವಿಜೇತರಿಗೆ 21 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಜನವರಿ 22ರ ನಂತರ ಅಯೋಧ್ಯೆಗೆ ಪ್ರವಾಸ ಕರೆದುಕೊಂಡು ಹೋಗುವ ಬಹುಮಾನವನ್ನೂ ಘೋಷಿಸಲಾಗಿದೆ. ರನ್ನರ್ ಅಪ್ಗೆ 11,000 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ. ಬಹುಮಾನಗಳ ಹೊರತಾಗಿ, ಆಟಗಾರರಿಗೆ ವೇದ ಮತ್ತು 100 ವರ್ಷಗಳ ‘ಪಂಚಾಂಗ’ ನೀಡಿ ಗೌರವಿಸಲಾಗುತ್ತಿದೆ.