ದೊಡ್ಡಬಳ್ಳಾಪುರ: ದನದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಮೂರು ಮೇಕೆಗಳನ್ನು ಕದ್ದೊಯ್ದಿರುವ ಘಟನೆ ತಾಲೂಕಿನ ಹಾದ್ರಿಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ ಸುಮಾರು 60 ಸಾವಿರ ರೂ.ಮೌಲ್ಯದ ಮೇಕೆಗಳನ್ನು ಕಳವು ಮಾಡಿದ್ದಾರೆ. ರಾತ್ರಿ ದನದ ಕೊಟ್ಟಿಗೆಯಲ್ಲಿ ಜಾನುವಾರು ಸಮೇತ ಮೇಕೆಗಳನ್ನು ಕಟ್ಟಿಹಾಕಲಾಗಿತ್ತು. ಮಂಗಳವಾರ ಬೆಳಿಗ್ಗೆ ಜಾನುವಾರುಗಳನ್ನು ಹೊರಗೆ ಕಟ್ಟಿಹಾಕಲು ಹೋದಾಗ ಕೊಟ್ಟಿಗೆಯ ಬಾಗಿಲ ಬೀಗ ಮುರಿದು ಎರಡು ಹೆಣ್ಣುಮೇಕೆ, ಒಂದು ಗಂಡು ಮೇಕೆ ಕದ್ದೋಯ್ದಿರುವುದು ಕಂಡು ಬಂದಿದೆ.
ಮೇಕೆ ಕಳ್ಳತನ ಕುರಿತು ಪೊಲೀಸರಿಗೆ ದೂರು ನೀಡಿದ್ದು,ಗ್ರಾಮಕ್ಕೆ ದೊಡ್ಡಬೆಳವಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಹಲವು ಗ್ರಾಮಗಳಲ್ಲಿ ಜಾನುವಾರು ಕಳ್ಳತನದಿಂದ ರೈತರು ಕಂಗಾಲಾಗಿದ್ದಾರೆ. ಒಂದು ಕಡೆ ಚಿರತೆ ಕಾಟ, ಮತ್ತೊಂದು ಕಡೆ ಜಾನುವಾರು ಕಳ್ಳರ ಕಾಟದಿಂದ ರೈತಾಪಿ ಜನರ ಬದುಕು ಅತಂತ್ರವಾಗಿದೆ. ಜಾನುವಾರು ಕಳ್ಳರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ರೈತರು ಒತ್ತಾಯಿಸಿದ್ದಾರೆ.