ರಾಯಚೂರು:- ಕಂಠಪೂರ್ತಿ ಕುಡಿದು ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದ ವ್ಯಕ್ತಿ ನೇರವಾಗಿ ಮಾನ್ವಿ ಪೊಲೀಸ್ ಠಾಣೆಗೆ ಬಂದು ನೀಡಿದ ಕಾಟಕ್ಕೆ ಪೊಲೀಸರೇ ಸುಸ್ತಾಗಿದ್ದರು. ಊಟದ ಹೊತ್ತಲ್ಲಿ ಎಂಟ್ರಿ ಕೊಟ್ಟಿದ್ದ ಆತನ ಕಿರಿಕ್ಗೆ ಖಾಕಿ ಪಡೆ ಏನ್ ಮಾಡಬೇಕು ಎಂದು ತಿಳಿಯದೇ ತಲೆ ಮೇಲೆ ಕೈ ಹೊತ್ತು ಕೂತಿದ್ದರು.
ಏಕಾಏಕಿ ಠಾಣೆಗೆ ಎಂಟ್ರಿ ಕೊಟ್ಟಿದ್ದ ನರಸಿಂಹ, ನನಗೆ ಹೆಂಡ್ತಿ ಬೇಕು, ಇಲ್ಲದಿದ್ದರೆ ಠಾಣೆ ಬಿಟ್ಟು ಹೋಗಲ್ಲ ಅಂತ ಪಟ್ಟು ಹಿಡಿದಿದ್ದಾನೆ. ಅರೆಬರೆ ಬಟ್ಟೆ ಹಾಕಿಕೊಂಡು ತೇಲಾಡುತ್ತಿದ್ದಿದ್ದನ್ನ ನೋಡಿ ಈತ ಪಕ್ಕಾ ಕುಡುಕ ಅನ್ನೋದು ಪೊಲೀಸರಿಗೆ ಗೊತ್ತಾಗಿದೆ. ಹೀಗಾಗಿ ಆತನಿಗೆ ತಿಳಿ ಹೇಳುವ ಪ್ರಯತ್ನ ಮಾಡಿದರೂ ಕೇಳಲಿಲ್ಲ.
ಬಿಸಿಲು ನೆತ್ತಿ ಸುಡುತ್ತಿದ್ದರಿಂದ ಆತನಿಗೆ ಮದ್ಯದಮಲು ನೆತ್ತಿಗೇರಿತ್ತು. ಪೊಲೀಸರ ಮಾತು ಕೇಳದೇ ಇಂಗ್ಲಿಷ್ನಲ್ಲಿ ಲೈಫ್ ಲಾಂಗ್ ಅಂತೆಲ್ಲಾ ಇಂಗ್ಲಿಷ್ನಲ್ಲಿ ಡೈಲಾಗ್ ಹೊಡೆದಿದ್ದಾನೆ. ಬಳಿಕ ನಾನು ಸಾಯೋ ವರೆಗೂ ಜಾಗ ಬಿಟ್ಟು ಕದಲಲ್ಲ ಅಂತ ಪಟ್ಟು ಹಿಡಿದಿದ್ದಾನೆ. ಅಲ್ಲಿದ್ದ ಕೆಲ ಸಾರ್ವಜನಿಕರು ಕೂಡ ಆತನನ್ನ ಮಾತನಾಡಿಸುವ ಪ್ರಯತ್ನ ಮಾಡಿರೂ ಸಾಧ್ಯವಾಗಲಿಲ್ಲ. ಬಳಿಕ ಆತನ ಊರು ಯಾವುದು ಅಂತ ವಿಚಾರಿಸಿದಾಗ ಎಲ್ಲ ಮಾಹಿತಿ ಬೆಳಕಿಗೆ ಬಂದಿದೆ.
ಕಿರಿಕ್ ಮಾಡಿದ ವ್ಯಕ್ತಿ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ರಾಜೋಳ್ಳಿ ಅನ್ನೋ ಗ್ರಾಮದ ನರಸಿಂಹ ಎಂದು ತಿಳಿದುಬಂದಿದೆ. ನಂತರ ಪೊಲೀಸರು ಆ ಊರಿನ ಕೆಲ ಪ್ರಮುಖರಿಗೆ ಮಾಹಿತಿ ನೀಡಿದರು. ಆದರೆ ಈತ ಬಂದಿದ್ಯಾಕೆ ಅನ್ನೋದನ್ನ ತೆಲುಗಿನಲ್ಲೇ ಹೇಳುತ್ತಿದ್ದ. ರಾಜೋಳ್ಳಿ ಗ್ರಾಮ ಆಂದ್ರದ ಗಡಿಯಲ್ಲಿರುವುದರಿಂದ ಈ ಭಾಗದ ಜನ ಸ್ವಲ್ಪ ಹೆಚ್ಚಾಗಿ ತೆಲುಗು ಭಾಷೆ ಹೆಚ್ಚಾಗಿ ಮಾತನಾಡುತ್ತಾರೆ.
ಅದೇ ರೀತಿ ಈ ನರಸಿಂಹ ಕೂಡ ತೆಲುಗು ಮಾತನಾಡುತ್ತಾ ಪೊಲೀಸರ ತಲೆ ಬಿಸಿ ಹೆಚ್ಚಿಸಿದ್ದ. ಈತ ತನಗೆ ಇಬ್ಬರು ಹೆಂಡತಿಯರಿದ್ದಾರೆ. ಅವರು ಬಿಟ್ಟು ಹೋಗಿದ್ದಾರೆ. ನನಗೆ ನನ್ನ ಹೆಂಡತಿಯರು ಬೇಕು. ನನ್ನ ಹೆಂಡ್ತಿರನ್ನ ನನ್ನ ಜೊತೆ ಕಳಿಸಿಕೊಡಿ ಅಂತ ಪಟ್ಟು ಹಿಡಿದಿದ್ದಾನೆ. ಒಂದು ವೇಳೆ ನನ್ನ ಹೆಂಡ್ತಿರು ನನ್ನ ಜೊತೆ ಬಾರದೇ ಇದ್ದರೆ ನಾನೂ ಇಲ್ಲೇ ಕುಳಿತುಕೊಳ್ಳುತ್ತೇನೆ ಅಂತ ತೆಲುಗಿನಲ್ಲಿ ಹೇಳಿದ್ದಾನೆ.
ನಿನ್ನೆ ಮಾನ್ವಿ ಪಟ್ಟಣಕ್ಕೆ ಬಂದಿದ್ದ ನರಸಿಂಹ ಕಂಠಪೂರ್ತಿ ಕುಡಿದಿದ್ದಾನೆ. ಹಣ ಖರ್ಚಾಗುವ ವರೆಗೂ ಕುಡಿದು ಬಳಿಕ ಆತನಿಗೆ ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂದು ಗೊತ್ತಾಗದೇ ಇದ್ದಾಗ ಪೊಲೀಸ್ ಠಾಣೆಗೆ ಬಂದು ಹೈಡ್ರಾಮಾ ಮಾಡಿದ್ದಾನೆ ಅಂತ ಹೇಳಲಾಗುತ್ತಿದೆ.