ಹುಬ್ಬಳ್ಳಿ:- ರಾಜಕಾರಣಕ್ಕಾಗಿ ಶ್ರೀರಾಮನನ್ನು ತೆಗೆದುಕೊಳ್ಳುವ ನೀಚ ಬುದ್ದಿ ನಮಗಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ನವರು ನಿಜವಾದ ಹಿಂದೂಗಳು. ನಾವು ಯಾವತ್ತೂ ಕೂಡ ರಾಜಕಾರಣಕ್ಕೆ ಹಿಂದುತ್ವ ಮತ್ತು ಶ್ರೀರಾಮನನ್ನು ತೆಗೆದುಕೊಂಡು ಬಂದಿಲ್ಲ. ದೇಶದಲ್ಲಿ ಲಕ್ಷಾಂತರ ರಾಮನ ದೇವಸ್ಥಾನಗಳಿವೆ. ಬಿಜೆಪಿಯವರು ಮತಕ್ಕಾಗಿ ಶ್ರೀರಾಮನನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನವರು ಯಾವತ್ತಿಗೂ ದೇವರನ್ನು ಹಾಗೂ ಹಿಂದುತ್ವವನ್ನು ರಾಜಕಾರಣದಲ್ಲಿ ಬಳಸಿಕೊಂಡಿಲ್ಲ. ಬಿಜೆಪಿಯವರಿಗೆ ಸದ್ಯ ಏನೂ ಬಂಡವಾಳ ಇಲ್ಲ. ಹೀಗಾಗಿ ಧರ್ಮವನ್ನು ತರುತ್ತಾರೆ. ಶ್ರೀ ರಾಮನನ್ನು ತರುತ್ತಾರೆ. ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಈ ವಿಚಾರದಲ್ಲಿ ಗಿಮಿಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರು ರಾಜಕಾರಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಬಿಜೆಪಿಯವರು ಪುಕ್ಸಟ್ಟೆಯಾಗಿ ಅಧಿಕಾರಕ್ಕೆ ಬಂದವರು, ಪುಕ್ಸಟ್ಟೆಯಾಗಿ ಏನೂ ಕೊಡಲಿಲ್ಲ. ಬಿಜೆಪಿಯವರು ಕೆಲಸ ಮಾಡಲ್ಲ, ಕೆಲಸ ಮಾಡುವವರಿಗೂ ಬಿಡಲ್ಲ. ಬಿಜೆಪಿಯವರ ಮಾತಿಗೆ ಕಿಮ್ಮತ್ತಿಲ್ಲ ಎಂದು ಲೇವಡಿ ಮಾಡಿದರು.