ಸ್ನೇಹ, ಪ್ರೀತಿ, ಸಂಬಂಧ ಏನೇ ಇರಬಹುದು, ತಾಯಿ ಮಗುವಿನ ಸಂಬಂಧವೇ ಇರಬಹುದು ಎಲ್ಲಾ ಸಂಬಂಧದಲ್ಲೂ ಮುತ್ತು ಅಥವಾ ಕಿಸ್ ಸಂಬಂಧ ಬೆಸೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಜೊತೆ ಜೊತೆಗೆ ಇಬ್ಬರ ಬಾಂದವ್ಯ ಕೂಡ ವೃದ್ಧಿಯಾಗುತ್ತದೆ.
ಕಿಸ್ ಮಾಡುವುದರಿಂದ ನಿಮ್ಮ ಹೃದಯ ಬಡಿತವನ್ನು ಆರೋಗ್ಯಕರ ರೀತಿಯಲ್ಲಿ ಪುನರುಜ್ಜೀವನ ಗೊಳಿಸುತ್ತದೆ ಅದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದು ವಿಜ್ಞಾನ ತಿಳಿಸಿದೆ. “ಇದು ನಿಮ್ಮ ರಕ್ತನಾಳಗಳನ್ನು ಹಿಗ್ಗಿಸುತ್ತದೆ – ರಕ್ತವು ಉತ್ತಮ, ಘನ ಶೈಲಿಯಲ್ಲಿ ಹರಿಯುತ್ತದೆ ಮತ್ತು ನಿಮ್ಮ ಎಲ್ಲಾ ಪ್ರಮುಖ ಅಂಗಗಳಿಗೆ ರಕ್ತ ಪರಿಚಲನೆಯಾಗುತ್ತದೆ.
ಕ್ಯಾಲೋರಿಗಳ ದಹನ
ಚುಂಬನದ ಮೂಲಕ ದೇಹದಲ್ಲಿ ಹೆಚ್ಚಿನ ಕ್ಯಾಲೋರಿಗಳನ್ನೂ ದಹಿಸಬಹುದು. ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ, ನಿಮ್ಮ ದೇಹದ ಅನಗತ್ಯ ಕ್ಯಾಲೋರಿಗಳನ್ನು ದಹಿಸಲು ಚುಂಬನ ನೆರವಾಗುತ್ತದೆ. ಎಷ್ಟು ಎಂದರೆ ಒಂದು ನಿಮಿಷಕ್ಕೆ ಸುಮಾರು ಆರು ಕ್ಯಾಲೋರಿಗಳಷ್ಟು. ವ್ಯಾಯಾಮಶಾಲೆಯಲ್ಲಿ ಕಠಿಣ ಪರಿಶ್ರಮದ ಕೆಲಸದ ಮೂಲಕ ನಾವು ಬಳಸಿಕೊಳ್ಳಬಹುದಾದ ಕ್ಯಾಲೋರಿಗಳು ಎಂದರೆ ಹನ್ನೊಂದು ಮಾತ್ರ.
ಅಂದರೆ ಇದರ ಅರ್ಧದಷ್ಟು ಪ್ರಮಾಣವನ್ನು ಸುಖವಾದ, ಆನಂದಮಯವಾದ ಚುಂಬನದ ಮೂಲಕ ಸಾಧಿಸಬಹುದು! ಆ ಪ್ರಕಾರ ಸುಮ್ಮನೇ ಟ್ರೆಡ್ ಮಿಲ್ ಮೇಲೆ ಓಡುತ್ತಾ ಕಾಲ ಕಳೆಯುವ ಬದಲು ಆರಾಮವಾಗಿ ಚುಂಬನದ ಸುಖವನ್ನು ಅನುಭವಿಸುತ್ತಾ ಇಷ್ಟೇ ಕಾಲದಲ್ಲಿ ಹೆಚ್ಚಿನ ಕ್ಯಾಲೋರಿಗಳನ್ನು ಕಳೆದುಕೊಳ್ಳಬಹುದು. ಆದ್ದರಿಂದ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರಿಗೆ ಚುಂಬನ ಖಂಡಿತವಾಗಿಯೂ ಸಹಕಾರಿಯಾಗಿದೆ.
ನಿರಾಳತೆಗೆ ನೈಸರ್ಗಿಕ ವಿಧಾನ
ಮನಸ್ಸಿನ ನಿರಾಳತೆಗೆ ನಮ್ಮ ದೇಹದಲ್ಲಿ ಸ್ರವಿಸುವ ಆಕ್ಸಿಟೋಸಿನ್ ಎಂಬ ರಸದೂತವೇ ಜವಾಬ್ದಾರಿಯಾಗಿದೆ. ಈ ರಸದೂತ ಅಗತ್ಯ ಪ್ರಮಾಣದಲ್ಲಿ ಸ್ರವಿಸಿದರೆ ದೇಹ ಮತ್ತು ಮನಸ್ಸುಗಳೆರಡೂ ನಿರಾಳವಾಗುತ್ತವೆ. ಇದೇ ರೀತಿಯಲ್ಲಿ ಸುಖದ ಅಥವಾ ಒಳ್ಳೆಯ ಭಾವನೆ ಮೂಡಿಸುವ ಇನ್ನೊಂದು ರಾಸಾಯನಿಕವೆಂದರೆ ಏಂಡಾರ್ಫಿನ್. ಚುಂಬನದ ಮೂಲಕ ದೇಹದಲ್ಲಿ ನಡೆಯುವ ನರಸಂವೇದನೆಯ ಮೂಲಕ ಇವೆರಡೂ ರಸದೂತಗಳು ಉತ್ತಮ ಮಟ್ಟದಲ್ಲಿ ಬಿಡುಗಡೆಯಾಗುತ್ತವೆ ಹಾಗೂ ದೇಹ ಮತ್ತು ಮನಸ್ಸನ್ನು ನಿರಾಳಗೊಳಿಸಿ ಸಂತೃಪ್ತಿಯ ಭಾವನೆಯನ್ನು ಮೂಡಿಸುತ್ತವೆ.
ಹಾಗಾಗಿ ಒಂದು ವೇಳೆ ಖಿನ್ನತೆ ಅಥವಾ ಉದ್ವಿಗ್ನತೆ ಆವರಿಸಿದ್ದರೆ ಸಂಗಾತಿಯ ಒಂದೇ ಅಧರಚುಂಬನ ಈ ಸ್ಥಿತಿಯಿಂದ ಹೊರತಂದು ಪರಿಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸನ್ನದ್ದವಾಗಿಸುತ್ತದೆ ಹಾಗೂ ಮನಸ್ಸನ್ನು ನಿರಾಳವಾಗಿಸುತ್ತದೆ. ಉದ್ವೇಗವನ್ನು ಕಡಿಮೆಗೊಳಿಸಲು ಚುಂಬನ ಅತ್ಯುತ್ತಮವಾಗಿದ್ದು ಧ್ಯಾನದ ಮೂಲಕ ಪಡೆಯುವ ನಿರಾಳತೆಯನ್ನೇ ಒದಗಿಸುತ್ತದೆ. ಅಲ್ಲದೇ ಡೋಪಮೈನ್ ಎಂಬ ಇನ್ನೊಂದು ರಾಸಾಯನಿಕವೂ ಬಿಡುಗಡೆಗೊಂಡು ಚುಂಬನ ಪಡೆದವರಲ್ಲಿಯೂ ಸಂತೃಪ್ತಿಯ ಭಾವನೆ ಮೂಡಿಸುತ್ತದೆ.
ಚುಂಬನದಿಂದ ಮುಖದ ಸ್ನಾಯುಗಳು ಬಲಗೊಳ್ಳುತ್ತದೆ
ಸದಾ ನಗುತ್ತಿದ್ದರೆ ಏನಾಗುತ್ತದೆ? ನೆರಿಗೆಗಳು ಸರಿಯಾದ ಸ್ಥಳದಲ್ಲಿಯೇ ಬೀಳುತ್ತವೆ ಎಂಬುದೊಂದು ಬೀಚಿಯವರ ನಗೆಹನಿ. ಹೀಗಾಗಬಾರದು ಎಂದರೆ ಸಂಗಾತಿಯನ್ನು ಉತ್ಕಟಭಾವದಿಂದ ಚುಂಬಿಸಬೇಕಾಗುತ್ತದೆ. ಹೀಗೆ ಮಾಡಿದವರು ಸದಾ ಸಂತೋಷದ ಭಾವನೆಯಲ್ಲಿರುತ್ತಾರೆ ಹಾಗೂ ಮುಖದ ದವಡೆಯ ಗೆರೆ ಸರಿಯಾದ ಸ್ಥಾನದಲ್ಲಿ ಪಡೆಯಲು ಸಾಧ್ಯವಾಗುತ್ತದೆ.
ಚುಂಬನದ ಸಮಯದಲ್ಲಿ ಮುಖದ ಸುಮಾರು ಮೂವತ್ತು ಸ್ನಾಯುಗಳು ಏಕಕಾಲದಲ್ಲಿ ತಮ್ಮ ಗರಿಷ್ಟ ಕ್ಷಮತೆಯಲ್ಲಿ ಕೆಲಸ ನಿರ್ವಹಿಸುತ್ತವೆ. ಈ ಮೂಲಕ ಮುಖದ ಸ್ನಾಯುಗಳು ಬಲಗೊಂಡು ಮುಖದ ಸೌಂದರ್ಯ ವೃದ್ದಿಸುತ್ತದೆ. ನಿಮ್ಮ ಮುಖದ ಮೂವತ್ತೂ ಸ್ನಾಯುಗಳನ್ನು ಪೂರ್ಣಪ್ರಮಾಣದಲ್ಲಿ ವ್ಯಾಯಾಮಕ್ಕೊಳಪಡಿಸಬೇಕೆಂದಿದ್ದರೆ ಅಧರಚುಂಬನ ಅತ್ಯುತ್ತಮವಾಗಿದೆ.
ಇದೊಂದು ನೋವು ನಿವಾರಕವೂ ಹೌದು
ಕಠಿಣ ಪರಿಶ್ರಮ ಹಾಗೂ ತಾಪಮಾನದಲ್ಲಿ ಬೆಂದು ಬಳಲಿ ಸುಸ್ತಾಗಿ ಮನೆಗೆ ಬಂದಾಗ ದೇಹದಲ್ಲಿ ಶಕ್ತಿ ಉಡುಗಿರುವುದು ಸ್ವಾಭಾವಿಕ. ಹೆಚ್ಚಿನವರು ಈ ಸಮಯದಲ್ಲಿ ಮೈ ಕೈ ನೋವನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ ನೋವು ನಿವಾರಕ ಗುಳಿಗೆಯನ್ನು ನುಂಗುವ ಬದಲು ಸಂಗಾತಿಯನ್ನು ಅಧರಚುಂಬನಕ್ಕೆ ಒಳಪಡಿಸಿ. ಇದರಿಂದ ದೇಹದಲ್ಲಿ ಮುದನೀಡುವ ಹಲವಾರು ರಾಸಾಯನಿಕಗಳು ಬಿಡುಗಡೆಯಾಗುತ್ತವೆ ಹಾಗೂ ಮೈ ಕೈ ನೋವು ಆಯಾಸಗಳೆಲ್ಲಾ ಕ್ಷಣಮಾತ್ರದಲ್ಲಿ ಮಾಯವಾಗುತ್ತವೆ.
ಹೃದಯವನ್ನು ಆರೋಗ್ಯಕರ ಹಾಗೂ ಯೌವನದಲ್ಲಿರಿಸಲು ಚುಂಬನ ನೆರವಾಗುತ್ತದೆ
ಚುಂಬನದ ಸಮಯದಲ್ಲಿ ನಮ್ಮ ದೇಹದಲ್ಲಿ ಅಡ್ರಿನಲಿನ್ ಎಂಬ ರಸದೂತವೂ ಬಿಡುಗಡೆಯಾಗುತ್ತದೆ. ಹಠಾತ್ತಾಗಿ ಅಪಾಯ ಎದುರಾದಾಗ ನಮ್ಮ ದೇಹದಲ್ಲಿ ಚಳಕು ಮೂಡುವುದಕ್ಕೂ ಈ ಅಡ್ರಿನಲಿನ್ನೇ ಕಾರಣ! ಆದರೆ ಚುಂಬನದ ಸಮಯದಲ್ಲಿ ಇಷ್ಟು ರಭಸವಾಗಿ ನುಗ್ಗದೇ ನಿಧಾನವಾಗಿ ಬಿಡುಗಡೆಯಾಗುತ್ತದೆ ಹಾಗೂ ಹೃದಯದ ಬಡಿತ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ.
ಇದೇ ಕಾರಣಕ್ಕೆ ಸಂಗಾತಿಯ ಚುಂಬನದ ಸಮಯದಲ್ಲಿ ನಿಮ್ಮ ಹೃದಯದ ಬಡಿತ ಹೆಚ್ಚಾಗುತ್ತದೆ ಹಾಗೂ ಮೈ ಬಿಸಿಯೇರುತ್ತದೆ. ಒಂದು ಸಂಶೋಧನೆಯಲ್ಲಿ ಪರಸ್ಪರ ಚುಂಬನ ಪಡೆಯುವ ದಂಪತಿಗಳು ಚುಂಬನ ಪಡೆಯದೇ ಇರುವ ದಂಪತಿಗಳಿಗಿಂತಲೂ ಐದು ವರ್ಷ ಹೆಚ್ಚು ಜೀವಿಸುತ್ತಾರೆ.
ಒತ್ತಡ ನಿವಾರಕವಾದ ಚುಂಬನ
ಚುಂಬನದ ಸಮಯದಲ್ಲಿ ಹೃದಯದ ಬಡಿತ ಹೆಚ್ಚುವುದು ಮಾತ್ರವಲ್ಲ, ರಕ್ತನಾಳಗಳೂ ಹಿಗ್ಗುತ್ತವೆ ಹಾಗೂ ಈ ಮೂಲಕ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ಅಧಿಕ ರಕ್ತದೊತ್ತಡವಿರುವ ವ್ಯಕ್ತಿಗಳು ಚುಂಬನಕ್ಕೆ ಹೆಚ್ಚು ಹೆಚ್ಚಾಗಿ ಒಲವು ತೋರಲು ಪ್ರೋತ್ಸಾಹಿಸಲಾಗುತ್ತದೆ. ಅಲ್ಲದೇ ದೇಹದಲ್ಲಿ ಒತ್ತಡಕ್ಕೆ ಕಾರಣವಾಗುವ ರಸದೂತಗಳ ಉತ್ಪಾದನೆಯನ್ನು ನಿಗ್ರಹಿಸಲೂ ಚುಂಬನ ನೆರವಾಗುವ ಮೂಲಕ ಒತ್ತಡದಿಂದ ಬಿಡುಗಡೆ ನೀಡುತ್ತದೆ.
ಮಾನಸಿಕ ಒತ್ತಡಕ್ಕೆ ಕಾರಣವಾದ ಮುಖ್ಯ ರಸದೂತವೆಂದರೆ ಕಾರ್ಟಿಸೋಲ್. ಚುಂಬನದ ಮೂಲಕ ಈ ರಸದೂತದ ಬಿಡುಗಡೆಯೂ ಕಡಿಮೆಯಾಗುತ್ತದೆ. ಆದ್ದರಿಂದ ವಿಪರೀತವಾದ ಒತ್ತಡಕ್ಕೆ ಒಳಗಾದವರು ಖಿನ್ನತಾನಿವಾರಕ (ಹಾಗೂ ಅಪಾಯಕಾರಿ) ಗುಳಿಗೆಯನ್ನು ಸೇವಿಸುವ ಬದಲು ತಮ್ಮ ಸಂಗಾತಿಯೊಂದಿಗೆ ಕೊಂಚ ಹೊತ್ತು ಅಧರಚುಂಬನದಲ್ಲಿ ಮಗ್ನರಾಗುವ ಮೂಲಕ ಈ ಒತ್ತಡದಿಂದ ಸುಲಭವಾಗಿ ಹೊರಬರಬಹುದು.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಚುಂಬನದ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚುವುದನ್ನು ಗಮನಿಸಲಾಗಿದೆ. ಚುಂಬನ ಒಂದು ಭಾವೋದ್ದೀಪ್ತವೂ ಹೌದು ಹಾಗೂ ದೇಹದಲ್ಲಿ ಹಲವಾರು ಶಾರೀರಿಕ ವ್ಯವಸ್ಥೆಗಳಿಗೆ ಚಾಲನೆ ನೀಡುವ ಮೂಲಕ ಪರೋಕ್ಷವಾಗಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಅಮೇರಿಕ ಡೆಂಟಲ್ ಅಸೋಸಿಯೇಶನ್ ಸಂಸ್ಥೆಯ ಸಲಹಾಕಾರರೂ ಅಗಿರುವ ಖಾಸಗಿ ದಂತವೈದ್ಯರು ಊಟದ ಬಳಿಕ ಹಲ್ಲುಜ್ಜಿಕೊಳ್ಳುವ ಬದಲು ಪರಸ್ಪರ ಚುಂಬಿಸುವ ಮೂಲಕ ಕೆಲವಾರು ಆರೋಗ್ಯಕರ ಪರಿಣಾಮವನ್ನು ಪಡೆಯಬಹುದು ಎಂದು ತಿಳಿಸುತ್ತಾರೆ.
ಈ ಸಮಯದಲ್ಲಿ ಅಧರಚುಂಬನ ನಡೆಸುವ ಮೂಲಕ ಬಾಯಿಯ ಬ್ಯಾಕ್ಟೀರಿಯಾಗಳೂ ಒಬ್ಬರಿಂದೊಬ್ಬರಿಗೆ ಜೊಲ್ಲಿನ ಮೂಲಕ ವಿನಿಮಯಗೊಳ್ಳುತ್ತವೆ. ಇದರಿಂದ ಬಾಯಿಗೆ ಆಗಮಿಸುವ ಬೇರೆಯ ಬ್ಯಾಕ್ಟೀರಿಯಾಗಳನ್ನು ನಮ್ಮ ದೇಹ ಪರಕೀಯ ಬ್ಯಾಕ್ಟೀರಿಯಾಗಳೆಂದೇ ಪರಿಗಣಿಸಿ ಇವುಗಳನ್ನು ಕೊಲ್ಲಲು ಪ್ರತಿಜೀವಕ ಕಣಗಳನ್ನು ಉತ್ಪಾದಿಸುತ್ತವೆ. ಈ ಮೂಲಕ ಒಟ್ಟಾರೆ ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳ್ಳುತ್ತದೆ.
ಶ್ವಾಸನಾಳದ ಅಲರ್ಜಿಗಳಿಂದ ದೂರವಿಡುತ್ತದೆ
ಜಪಾನ್ ನಲ್ಲಿ ನಡೆದ ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಚುಂಬನದ ಮೂಲಕ ದೇಹದಲ್ಲಿ ಹಿಸ್ಟಮೈನ್ ಎಂಬ ರಸದೂತದ ಸ್ರಾವ ಕಡಿಮೆಗೊಳ್ಳುತ್ತದೆ. ಈ ಮೂಲಕ ಶ್ವಾಸನಾಳದಲ್ಲಿ ಎದುರಾಗುವ ಅಲರ್ಜಿಗಳನ್ನು ಕಡಿಮೆಗೊಳಿಸಬಹುದು/ನಿವಾರಿಸಲೂಬಹುದು.