ದೊಡ್ಡಬಳ್ಳಾಪುರ: ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಪರಿಪಕ್ವವಾಗಲು ಪಠ್ಯದ ಜೊತೆಗೆ ಮಾನವೀಯ ಮೌಲ್ಯಗಳು, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ರೀತಿಯ ಪಠ್ಯೇತರ ಚಟುವಟಿಕೆ ಏರ್ಪಡಿಸಿ ಸರ್ವತೋಮುಖ ಬೆಳವಣಿಗೆಗೆ ಶಾಲೆಗಳು ಶ್ರಮಿಸಬೇಕು ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶ್ರೀ ಗುಬ್ಬಿ ಚೆನ್ನಬಸವೇಶ್ವರ ಎಜುಕೇಷನ್ ಟ್ರಸ್ಟ್ ನ ನ್ಯಾಷನಲ್ ಪ್ರೈಡ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಬಹಳ ನಿರ್ಣಯಕವಾಗಿದೆ. ಈ ನಿಟ್ಟಿನಲ್ಲಿ ನ್ಯಾಷನಲ್ ಪ್ರೈಡ್ ಶಾಲೆಯು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು,
ಆಡಳಿತ ಮಂಡಳಿ ಸಹ ಶಿಕ್ಷಣ ಸೇವೆ ಮುಂದುವರೆಸಿಕೊಂಡು ಶಾಲೆಯ ಜೊತೆಗೆ ಕಾಲೇಜು ಕೂಡ ಪ್ರಾರಂಭಿಸುವಂತಾಗಲಿ ಎಂದು ಆಶಿಸಿದರು. ಶಾಲೆಯ ಕಾರ್ಯದರ್ಶಿ ಸಿ.ಎನ್. ಸತೀಶ್ ಮಾತನಾಡಿ, ನಮ್ಮ ಶಾಲೆಯಲ್ಲಿ ಸಮಯ ಪಾಲನೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅದೇರೀತಿ ಸರ್ವ ಧರ್ಮ ಸಮನ್ವಯತೆ ಶಾಲೆ ಇದಾಗಿದೆ. ಎಲ್ಲ ಧರ್ಮಿಯ ಮಕ್ಕಳಿಗೆ ಅವರವರ ಧರ್ಮದ ಪ್ರಾರ್ಥನೆ ಹೇಳಿಕೊಡಲಾಗುತ್ತದೆ ಹೇಳಿದರು. ಸಂಭ್ರಮ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಪ್ರತಿಭೆ ಹೊರಹಾಕಲು ಅವಕಾಶ ನೀಡಲಾಗಿದೆ.
ಅದರಂತೆ ಮಕ್ಕಳ ಜೊತೆ ಪೋಷಕರು, ಶಿಕ್ಷಕರು ಸಹ ನೃತ್ಯ ಪ್ರದರ್ಶನ ಮಾಡಿ ಸಂತಸಪಟ್ಟಿದ್ದಾರೆ ಎಂದು ಹೇಳಿದರು. ಮಕ್ಕಳಿಂದ ಗೀತ ಗಾಯನ, ನೃತ್ಯ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಕಣ್ಮನ ಸೆಳೆದವು. ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಸಿ. ನಾಗರಾಜು, ಕೇಂದ್ರ ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ, ಡಾ.ಅರ್ಜುನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.