ಚಿತ್ರ ನಟ ಯಶ್ ಜನ್ಮದಿನದ ಹಿನ್ನಲೆ ಅವರ ಬ್ಯಾನರ್ ಕಟ್ಟುವಾಗ ಮೂವರು ಅಭಿಮಾನಿಗಳು ದಾರುಣ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೊರಣಗಿ ಗ್ರಾಮದಲ್ಲಿ ನಡೆದಿದೆ.
ಹನಮಂತ ಹರಿಜನ, ಮುರಳಿ ನಡವಿನಮನಿ, ನವೀನ್ ಗಾಜಿ ಮೃತ ಯುವಕರು. ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಎಲ್ಲರೂ ಸೂರಣಗಿ ಗ್ರಾಮದವರು.
ಯಶ್ ಅವರ ಜನ್ಮದಿನಕ್ಕೆ ಶುಭಾಶಯ ಕೋರುವ ಬ್ಯಾನರ್ ಅನ್ನು ಹಸಿ ನೀಲಗಿರಿ ಕಟ್ಟಿಗೆಗೆ ಕಟ್ಟಿ ಮೇಲೆತ್ತುವಾಗ ವಿದ್ಯುತ್ ತಂತಿ ತಗುಲಿ ಕರೆಂಟ್ ಶಾಕ್ ಹೊಡೆದು ಅವಘಡ ಸಂಭವಿಸಿದೆ. ಈ ಅವಘಡ ಯುವಕರ ಸಾವಿಗೆ ಕಾರಣವಾಗಿದೆ. ಘಟನೆ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟ ಯಶ್ ಜನ್ಮದಿನದಂದು ಈ ಹಿಂದೆಯೂ ಅವಘಡಗಳು ಸಂಭವಿಸಿದ್ದವು, 2018ರಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಹಾವೇರಿಯಲ್ಲಿ ನಡೆದ ಊರಹಬ್ಬಕ್ಕೆ ಯಶ್ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶಿಸಿ ಹಾವೇರಿಯ ಅಗಡಿ ಮೂಲದ ಹರೀಶ್ ಎರಡೂ ಕೈ ಕಳೆದುಕೊಂಡಿದ್ದರು. ಹರೀಶ್ ಗೆ ಆದ ದುರಂತ ವಿಚಾರ ತಿಳಿದು ನಟ ಯಶ್, ಆತನ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಿದ್ದರು.