ಹುಕ್ಕೇರಿ: “ಡಿಸಿಎಂ ಮಾಡಿ ಎಂದು ನಾವು ಯಾರು ಕೇಳಿಯೇ ಇಲ್ಲ. ನಮ್ಮಲ್ಲಿ ಯಾವುದೇ ಕಿತ್ತಾಟ ಇಲ್ಲ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಹುಕ್ಕೇರಿ ಪಟ್ಟಣದಲ್ಲಿಂದು ನೂತನ ಇಂದಿರಾ ಕ್ಯಾಂಟೀನ್ ಹಾಗೂ ಅರಣ್ಯ ಇಲಾಖೆ ಕಚೇರಿ ಕಟ್ಟಡ ಉದ್ಘಾಟಿಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ, ಯಾರೂ ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ” ಎಂದರು.
ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ನೀಡಿರುವ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿ, “ಸರ್ಕಾರ ಎಂದರೆ ತೂಗುಗತ್ತಿ ಇದ್ದಂತೆ. ರಾಜ್ಯದ ಜನರು ಐದು ವರ್ಷಗಳ ಕಾಲ ಆಡಳಿತ ನಡೆಸಲು ಅಧಿಕಾರ ಕೊಟ್ಟಿದ್ದಾರೆ. ಒಳ್ಳೆಯ ಕೆಲಸ ಮಾಡಲು ಪ್ರಯತ್ನ ಮಾಡುತ್ತೇವೆ” ಎಂದರು.
ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಟೀಕೆ ವಿಚಾರವಾಗಿ ಮಾತನಾಡಿ, “ಒಬ್ಬರ ಮೇಲೆ ಕೇಸ್ ಹಾಕಿದ ಮಾತ್ರಕ್ಕೆ, ಎಲ್ಲಾ ಹಿಂದೂಗಳ ಮೇಲೆ ಪ್ರಕರಣ ಎನ್ನಲು ಆಗುವುದಿಲ್ಲ. ಕೇಸ್ ವಿಚಾರದಲ್ಲಿ ಹಿಂದೂ ಎಂದು ಹೇಳಲು ಆಗುವುದಿಲ್ಲ. ಈ ಸಂಬಂಧ ನ್ಯಾಯಾಲಯ ತೀರ್ಪು ಕೊಡುತ್ತದೆ, ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕು” ಎಂದು ಹೇಳಿದರು.
ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆಯಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಆಹ್ವಾನ ಕೊಟ್ಟಿರುವ ಬಗ್ಗೆ ಬಿಜೆಪಿ ಅವರನ್ನೇ ಕೇಳಬೇಕು. ಬಿಜೆಪಿ ಅವರು ಆಹ್ವಾನ ಕೊಟ್ಟಿದ್ದರೆ ಉದ್ಘಾಟನೆಗೆ ಹೋಗುತ್ತೇವೆ” ಎಂದರು. ನಮಗೆ ರಾಮ ಎಂದರೇ ಸಿದ್ದರಾಮಯ್ಯನವರೇ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರ ಮಾತನಾಡಿ, ” ಕಾರ್ಯಕರ್ತರು ಅವರವರ ನಾಯಕರನ್ನು ಭಕ್ತಪೂರ್ವಕವಾಗಿ, ದೇವರ ರೂಪದಲ್ಲಿ ನೋಡುತ್ತಾರೆ. ದೇವರ ರೂಪದಲ್ಲಿ ನೋಡುವುದರಲ್ಲಿ ತಪ್ಪೇನಿಲ್ಲ. ದೇವರು ಬೇರೆ, ಮನುಷ್ಯರೇ ಬೇರೆ. ನರೇಂದ್ರ ಮೋದಿ, ಯಡಿಯೂರಪ್ಪ, ದೇವೇಗೌಡ ಅವರನ್ನು ಆಯಾ ಪಕ್ಷಗಳ ಕಾರ್ಯಕರ್ತರು ಅದೇ ರೀತಿ ನೋಡುತ್ತಾರೆ. ಸಿದ್ದರಾಮಯ್ಯ ಅವರನ್ನ ಪಕ್ಷದ ಕಾರ್ಯಕರ್ತರು ದೇವರೆಂದು ನೋಡುತ್ತಾರೆ, ನಾನು ಸಹ ಹಾಗೇ ನೋಡುತ್ತೇನೆ” ಎಂದರು.