ಬೆಂಗಳೂರು, ಜನವರಿ 07: ಎನ್.ಪಿ.ಎಸ್ ರದ್ದತಿ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಪದಾಧಿಕಾರಿಗಳು ಇಂದು ಅವರನ್ನು ಭೇಟಿಯಾಗಿ ಎನ್.ಪಿ.ಎಸ್ ರದ್ದತಿ ಬಗ್ಗೆ ಚರ್ಚಿಸಿದರು.
ಎನ್.ಪಿ.ಎಸ್ ರದ್ದತಿಯ ಸಾಧ್ಯಾಸಾಧ್ಯತೆಗಳ ಕುರಿತು ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು. ಇದನ್ನು ರದ್ದು ಪಡಿಸಿದ ಇತರ ರಾಜ್ಯಗಳಲ್ಲಿ ಅನುಸರಿಸಿರುವ ಕ್ರಮಗಳ ಕುರಿತೂ ಸಹ ಪರಿಶೀಲಿಸಲಾಗುವುದು. ಆರ್ಥಿಕ ಇಲಾಖೆ ಕೂಡ ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಲಿದೆ ಎಂದರು.
ಮುಖ್ಯಮಂತ್ರಿಗಳ ಹಾಗೂ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ: ತ್ರಿಲೋಕ್ ಚಂದ್ರ , ಎಸ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಂ ತೇಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ್ ಹಾಗೂ ವಿವಿಧ ಸರ್ಕಾರಿ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.