ಬೆಂಗಳೂರು:- ತಮ್ಮ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ ಸಾಕಷ್ಟು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದ ಅತಿಥಿ ಉಪನ್ಯಾಸಕರ ನಿಯೋಗವು ಇಂದು CM ಸಿದ್ದರಾಮಯ್ಯ ರನ್ನು ಭೇಟಿ ಮಾಡಿದೆ.
ಇದೇ ವೇಳೆ ಮುಷ್ಕರ ಹಿಂಪಡೆಯಲು ಅತಿಥಿ ಉಪನ್ಯಾಸಕರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದು, ಜೊತೆಗೆ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳಕ್ಕೆ ಸಿಎಂ ಸಮ್ಮತಿ ನೀಡಿದ್ದಾರೆ.
2023 ಡಿಸೆಂಬರ್ 29 ರಂದು ಅತಿಥಿ ಉಪನ್ಯಾಸಕರ ವೇತನವನ್ನು 5 ಸಾವಿರ ರೂಪಾಯಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆ ಬಗ್ಗೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ‘ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ, ಆರೋಗ್ಯ ವಿಮೆ ಸೇರಿದಂತೆ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದ್ದರು. ಅಷ್ಟಕ್ಕೆ ಸುಮ್ಮನಾಗದ ಉಪನ್ಯಾಸಕರು, ಪುನಃ ಹೋರಾಟ ಆರಂಭಿಸಿದ್ದರು, ಇದೀಗ ಸಿಎಂ, 5 ಸಾವಿರದಿಂದ 8 ಸಾವಿರಕ್ಕೆ ಗೌರವಧನ ಹೆಚ್ಚಿಸಿದ್ದಾರೆ.
ಇನ್ನು ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿದ್ದೇವೆ. ಕೆಲವು ಬೇಡಿಕೆಗಳನ್ನು ನಮ್ಮ ಮುಂದೆ ಇಟ್ಟಿದ್ದರು. ಸೇವೆ ಖಾಯಂ ಅವರ ಪ್ರಮುಖ ಬೇಡಿಕೆ ಆಗಿದೆ. ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡಲಾಗುವುದು. ಅತಿಥಿ ಉಪನ್ಯಾಸಕರನ್ನು ಗೌರವದಿಂದ ನಡೆಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸುಧಾಕರ್ ಹೇಳಿದ್ದರು.