ರಾಯಬಾಗ: ಇಲ್ಲಿಯ ಪುಟಾಣಿ ಮಕ್ಕಳು ಪ್ರತಿದಿನ ಶಾಲೆಗೆ ಹೋಗಬೇಕಾದರೆ ದಾರಿಯನ್ನು ಹುಡುಕಿಕೊಂಡು ದಾರಿ ಯಾವುದಯ್ಯ ಎನ್ನುವಂತಾಗಿದೆ.
ಪದೇ ಪದೇ ಈ ರಸ್ತೆ ತಡೆ ಆಗುತ್ತಿರುವುದರಿಂದ ಪ್ರತಿನಿತ್ಯ ಮಕ್ಕಳು ಕಲ್ಲು ಮುಳ್ಳುಗಳನ್ನು ದಾಟಿಕೊಂಡು ಶಾಲೆಗೆ ಹೋಗವ ಚಿಂತಾಜನಕ ಸ್ಥಿತಿ ನಿರ್ಮಾಣವಾಗಿದೆ.
ಹೌದು…. ರಾಯಬಾಗ ತಾಲೂಕಿನ ಕಂಚಕರವಾಡಿಯ ಕಳ್ಳಿತೋಟ, ಸುಲ್ತಾಪೂರ ತೋಟದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗಬೇಕಾದರೆ ಕಾಲುವೆಯ ಮಾರ್ಗವಾಗಿ ಶಾಲೆಯನ್ನು ತಲುಪಲು 18 ಅಡಿಯ ರಸ್ತೆ ಇದ್ದರೂ ಕೂಡ ಅಕ್ಕಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡು ಶಾಲೆಗೆ ಬರುವ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ದಾರಿ ಬಿಡದೆ, ದಾರಿಯಲ್ಲಿ ಮುಳ್ಳನಿಟ್ಟ ರಸ್ತೆ ತಡೆ ಮಾಡುತ್ತಿದ್ದಾರೆ ಎಂದು ಈ ಶಾಲೆಗೆ ಭೂದಾನ ಮಾಡಿದ ಶಿವರಾಯಿಯವರ ಆರೋಪವಾಗಿದೆ.
ಈ ಸಮಸ್ಯೆ ಕುರಿತು ಎಷ್ಟೇ ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ರಾಯಬಾಗ ಗ್ರಾಮೀಣ ಭಾಗದ ಪಿಡಿಓ ಅವರಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.
ಆಡಳಿತದಲ್ಲಿರುವ ಅಧಿಕಾರಿ ಮಹಾಶಯರು ನಿದ್ದೆಗೆ ಜಾರಿದ್ದಾರೆ? ಎನ್ನುವುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ. ಇನ್ನಾದರೂ ಈ ಮಕ್ಕಳ ಸಂಕಷ್ಟಕ್ಕೆ ಶಾಶ್ವತ ಪರಿಹಾರ ನೀಡುತ್ತಾರಾ? ಅಂತ ಕಾಯ್ದು ನೋಡೋಣ.