ದೆಹಲಿ: ಭೂಮಿಯಿಂದ ಸೂರ್ಯನತ್ತ (Sun) ಹೊರಟು ನಾಲ್ಕು ತಿಂಗಳ ಪೂರೈಸಿ, 15 ಲಕ್ಷ ಕಿ.ಮೀ ಕ್ರಮಿಸಿರುವ ಆದಿತ್ಯ ಎಲ್1 (Aditya-L1) ನೌಕೆಯನ್ನು ಇಂದು ಅದರ ನಿಗದಿತ ಕಕ್ಷೆಗೆ ಸೇರಿಸಲು ಇಸ್ರೋ (ISRO) ವಿಜ್ಞಾನಿಗಳು ಸಜ್ಜಾಗಿದ್ದಾರೆ.
ಕಳೆದ ವರ್ಷ ಸೆ.2ರಂದು ಆದಿತ್ಯ ಎಲ್1 ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಇದೀಗ 15 ಲಕ್ಷ ಕಿ.ಮೀ ಸಂಚರಿಸಿ ನಿಗದಿತ ಕಕ್ಷೆಯ ಬಳಿ ಸಮೀಪಿಸಿರುವ ಅದನ್ನು ಎಲ್1 ಪಾಯಿಂಟ್ ಎಂಬ ನಿರ್ವಾತ ಪ್ರದೇಶಕ್ಕೆ ಸೇರಿಸಲಾಗುತ್ತದೆ. ಉಪಗ್ರಹವನ್ನು ಸುಮಾರು ಸಂಜೆ 4 ಗಂಟೆಗೆ ಲ್ಯಾಗ್ರೇಂಜ್ ಪಾಯಿಂಟ್ 1 (L1) ಗೆ ಸೇರಿಸುವ ನಿರೀಕ್ಷೆಯಿದೆ. ಅಕಸ್ಮಾತ್ ಅದನ್ನು ಆ ಪ್ರದೇಶಕ್ಕೆ ಸೇರಿಸದೇ ಇದ್ದರೆ ಅದು ಸೂರ್ಯನೆಡೆಗೆ ಸಂಚರಿಸಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇಂದು (ಶನಿವಾರ) ಇಸ್ರೋಗೆ ಮಹತ್ವದ ದಿನವಾಗಿದೆ
ಸೂರ್ಯನ ವಿವರವಾದ ಅಧ್ಯಯನಕ್ಕಾಗಿ ಆದಿತ್ಯ ಎಲ್ -1 ಏಳು ವಿಭಿನ್ನ ಪೇಲೋಡ್ಗಳನ್ನು ಹೊಂದಿದೆ. ಅವುಗಳ ಪೈಕಿ ನಾಲ್ಕು ಸೂರ್ಯನ ಬೆಳಕನ್ನು ಪರಿಶೀಲಿಸಲಿವೆ ಮತ್ತು ಇತರ ಮೂರು ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ಇನ್-ಸಿಟು ನಿಯತಾಂಕಗಳನ್ನು ಅಳೆಯಲಿವೆ.
ಈ ಉಪಕರಣಗಳು ಸೌರ ಜ್ವಾಲೆಗಳು ಮತ್ತು ಕರೋನಲ್ ಮಾಸ್ ಎಜೆಕ್ಷನ್ಗಳಂತಹ ಸೌರ ಚಟುವಟಿಕೆಗಳ ಡೇಟಾವನ್ನು ಒದಗಿಸಲಿವೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.