ಬೆಂಗಳೂರು: ಸಿಲಿಕಾನ್ ಸಿಟಿ ಜನರ ಸಮಸ್ಯೆಗಳನ್ನ ಆಲಿಸಲು ಸರ್ಕಾರ ಆರಂಭಿಸಿರೋ ಮನೆ ಬಾಗಿಲಿಗೆ ಸರ್ಕಾರ, ಇರಲಿ ನಿಮ್ಮ ಸಹಕಾರ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸು ಸಿಗ್ತಿದೆ ಇತ್ತೀಚೆಗಷ್ಟೇ ಕೆ.ಆರ್.ಪುರಂನಲ್ಲಿ ಮೊದಲನೇ ಕಾರ್ಯಕ್ರಮ ನಡೆಸಿ ಯಶಸ್ವಿಯಾಗಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಇವತ್ತು ಎರಡನೆಯ ಕಾರ್ಯಕ್ರಮವನ್ನ ಯಶಸ್ವಿಯಾಗಿ ಮುಗಿಸಿದ್ದಾರೆ. ಯಲಹಂಕ ವ್ಯಾಪ್ತಿಯಲ್ಲಿ ನಡೆದ ಮನೆ ಬಾಗಿಲಿಗೆ ಸರ್ಕಾರ, ಇರಲಿ ನಿಮ್ಮ ಸಹಕಾರ ಕಾರ್ಯಕ್ರಮದ ಝಲಕ್ ಇಲ್ಲಿದೆ ನೋಡಿ
ಪ್ರತಿನಿತ್ಯ ಹಲವು ಸಮಸ್ಯೆಗಳನ್ನ ಮುಂದಿಟ್ಟುಕೊಂಡು ಜನಪ್ರತಿನಿಧಿಗಳ ಮನೆ ಬಾಗಿಲ ಬಳಿ ಕಾಯ್ತಿದ್ದ ಜನರಿಗೆ ಸರ್ಕಾರ ಹೊಸದಾಗಿ ಜಾರಿಮಾಡಿರೋ ಮನೆ ಬಾಗಿಲಿಗೆ ಸರ್ಕಾರ-ಇರಲಿ ನಿಮ್ಮ ಸಹಕಾರ ಜನಸ್ಪಂದನ ಕಾರ್ಯಕ್ರಮ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಮೊನ್ನೆಯಷ್ಟೇ ಕೆ.ಆರ್.ಪುರಂನಲ್ಲಿ ಈ ಕಾರ್ಯಕ್ರಮ ಉದ್ಘಾಟಿಸಿ ಸುಮಾರು 4 ಸಾವಿರ ದೂರುಗಳನ್ನ ಆಲಿಸಿದ್ದ ಡಿ.ಕೆ.ಶಿವಕುಮಾರ್, ಇವತ್ತು ಯಲಹಂಕ, ಬ್ಯಾಟರಾಯನಪುರ ಹಾಗೂ ದಾಸರಹಳ್ಳಿ ವಿಧಾನಸಭಾಕ್ಷೇತ್ರದ ಜನರ ಸಮಸ್ಯೆ ಆಲಿಸಿದ್ರು. ಕಂದಾಯ ಸಚಿವ ಕೃಷ್ಣ ಭೈರೇಗೌಡ, ಶಾಸಕರಾದ ಮುನಿರಾಜು, ಎಸ್.ಆರ್.ವಿಶ್ವನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಜನರ ಅಹವಾಲು ಸ್ವೀಕರಿಸಿದ್ರು
ಯಲಹಂಕ ನ್ಯೂ ಟೌನ್ ನ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂಗೆ ಮೂರು ಕ್ಷೇತ್ರಗಳಿಂದ ಸುಮಾರು ಎರಡೂವರೆ ಸಾವಿರ ದೂರು ಬಂದಿವೆ. ಅಧಿಕಾರಿಗಳ ಜೊತೆ ಜನರ ಸಮಸ್ಯೆ ಆಲಿಸಿದ ಡಿಸಿಎಂ, ಕೆಲ ಜನರಿಗೆ ಸ್ಥಳದಲ್ಲೇ ಸಮಸ್ಯೆ ಬಗೆಹರಿಸಿದ್ರು. ಕಾರ್ಯಕ್ರಮ ಉದ್ಘಾಟಿಸಿದ ಡಿಕೆಶಿ, ವೇದಿಕೆಯಿಂದ ಇಳಿದು ವಿಕಲಚೇತನರ ಅರ್ಜಿ ಸ್ವೀಕರಿಸಿದ್ರು. ಇನ್ನು ಕಷ್ಟ ಅಂತಾ ಬಂದ ಅಂಧ ವಿದ್ಯಾರ್ಥಿನಿ ಇವ್ಯಾಂಜಲಿಗೆ ಬಿಬಿಎಂಪಿಯಲ್ಲಿ ಕೆಲಸ ನೀಡುವಂತೆ ಸೂಚಿಸೋ ಮೂಲಕ ಗಮನಸೆಳೆದ್ರು. ಸುಂಕದಕಟ್ಟೆಯ ಶಾಂತಿಧಾಮ ಶಾಲೆ ವಿದ್ಯಾರ್ಥಿನಿಯಾದ ಇವ್ಯಾಂಜಲಿಗೆ ಪಾಲಿಕೆಯಲ್ಲಿ ಕುಳಿತು ಮಾಡುವ ಕೆಲಸ ಕೊಡುವಂತೆ ಸೂಚಿಸಿದ್ರು.ನಮಗೆ ನೀವು ಅವಕಾಶ ಕೊಟ್ಟಿದ್ದೀರ,ನಿಮ್ಮ ಋಣ ತೀರಿಸ್ತೀನಿ ಅಂತಾ ಜನರಿಗೆ ಅಭಯ ನೀಡಿದ್ರು
ಇನ್ನೂ ಜನರ ಅರ್ಜಿಗಳನ್ನ ಸ್ವೀಕರಿಸೋ ವೇಳೆ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸ್ದಳದಲ್ಲೇ ಧನಸಹಾಯ ಮಾಡಿದ ಡಿಕೆ,ಬಿಬಿಎಂಪಿಯ ಕಮಿಷನರ್ ಗೆ ದೂರು ಸಲ್ಲಿಸಿರೋ ಜನರನ್ನ ಕೆಲದಿನಗಳ ಬಳಿಕ ಒಂದೆಡೆ ಸೇರಿಸಿ ಸಮಸ್ಯೆ ಬಗೆಹರಿದಿದೆಯಾ ಅನ್ನೋದನ್ನ ಪರಿಶೀಲಿಸಲು ಸೂಚಿಸಿದ್ರು. ಅಲ್ಲದೇ ದೂರು ಅರ್ಜಿ ನೀಡಲು ಬಂದವರ ವಿವರಗಳನ್ನ ತಾವೇ ಬರೆದುಕೊಂಡ ಡಿಸಿಎಂ, ನಿಮಗೆ ಕರೆ ಬರುತ್ತೆ,.ಸಮಸ್ಯೆ ಬಗೆಹರಿಯುತ್ತೆ ಅಂತಾ ಅಭಯ ನೀಡಿದ್ರು
ಒಟ್ಟಾರೆ ಜನರ ಬಳಿಗೆ ಹೋಗಿ ಸಮಸ್ಯೆಗಳನ್ನ ಆಲಿಸುವ ಈ ವಿನೂತನ ಕಾರ್ಯಕ್ರಮದ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ವಿವಿಧ ಕ್ಷೇತ್ರಗಳ ಜನರ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ.ನಾಳೆ ಶಿವಾಜಿನಗರ, ಹೆಬ್ಬಾಳ,ಪುಲಕೇಶಿನಗರ ವ್ಯಾಪ್ತಿಯಲ್ಲಿ ಜನರ ಸಮಸ್ಯೆಗಳನ್ನ ಆಲಿಸಲು ಸಜ್ಜಾಗಿದ್ದು, ಸದ್ಯ ಅರ್ಜಿ ಸಲ್ಲಿಸಿರೋ ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಸಿಕ್ಕಿದ್ದಕ್ಕೆ ಫುಲ್ ಖುಷಿ ಆಗಿದ್ದಾರೆ