ಸೇಬು ಸಿಪ್ಪೆಯಿಂದ ತಯಾರಿಸಿ ಈ ಎಲ್ಲ ರೆಸಿಪಿ
ಸೇಬು ಸಿಪ್ಪೆ ಮತ್ತು ದಾಲ್ಚಿನ್ನಿ ಚಹಾ : ಸೇಬು ಹಣ್ಣಿನ ಸಿಪ್ಪೆಯನ್ನು ಬಿಸಾಡುವ ಬದಲು ಟೀ ಮಾಡಿ ಕುಡಿಯಬಹುದು. ಇದಕ್ಕಾಗಿ ಮೊದಲು ಸೇಬು ಹಣ್ಣಿನ ಸಿಪ್ಪೆಯನ್ನು ತೆಗೆಯಿರಿ. ಈಗ ಬಾಣಲೆಗೆ ಸ್ವಲ್ಪ ನೀರು, ಒಂದು ಸಣ್ಣ ದಾಲ್ಚಿನ್ನಿ ಮತ್ತು ಸೇಬು ಹಣ್ಣಿನ ಸಿಪ್ಪೆಯನ್ನು ಹಾಕಿ ಕುದಿಸಿ. ತಯಾರಾದ ಚಹಾವನ್ನು ಸೋಸಿಕೊಳ್ಳಿ ಮತ್ತು ರುಚಿಗೆ ತಕ್ಕಂತೆ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ತೂಕವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಇದು ದೇಹವನ್ನು ಒಳಗಿನಿಂದ ಸ್ವಚ್ಛಗೊಳಿಸುವ ಕೆಲಸ ಮಾಡುತ್ತದೆ.ಸೇಬು ಹಣ್ಣಿನ ಸಿಪ್ಪೆ ಹಾಗೂ ದಾಲ್ಚಿನಿ ಟೀ, ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಸೇಬು ಹಣ್ಣಿನ ಸಿಪ್ಪೆಯ ಸಲಾಡ್ : ಸೇಬು ಹಣ್ಣಿನಂತೆಯೇ ಇದರ ಸಿಪ್ಪೆಯಲ್ಲಿಯೂ ಪೋಷಕಾಂಶಗಳು, ಆ್ಯಂಟಿ ಆಕ್ಸಿಡೆಂಟ್ಗಳು ಮತ್ತು ವಯಸ್ಸಾಗದಂತೆ ತಡೆಯುವ ಗುಣಗಳು ಹೇರಳವಾಗಿವೆ. ಅದಕ್ಕಾಗಿಯೇ ನೀವು ಇದನ್ನು ಸಲಾಡ್ ಆಗಿ ಸೇವಿಸಬಹುದು. ಇದಕ್ಕಾಗಿ, ಸೇಬು ಹಣ್ಣಿನ ಸಿಪ್ಪೆಗಳನ್ನು ಉದ್ದದ್ದವಾಗಿ ಕತ್ತರಿಸಿ. ಈಗ ಅದನ್ನು ತರಕಾರಿಗಳು ಮತ್ತು ಹಣ್ಣುಗಳ ಸಲಾಡ್ ಮೇಲೆ ಇರಿಸಿ, ನಂತ್ರ ಸೇವನೆ ಮಾಡಿ. ಇದು ನಿಮ್ಮ ಆರೋಗ್ಯ ಮತ್ತು ನಿಮ್ಮ ಚರ್ಮ ಎರಡಕ್ಕೂ ಪ್ರಯೋಜನಕಾರಿಯಾಗಿದೆ.
ಸೇಬು ಹಣ್ಣಿನ ಸಿಪ್ಪೆಗಳಿಂದ ಜಾಮ್ ಮಾಡಿ : ಸೇಬು ಹಣ್ಣಿನ ಸಿಪ್ಪೆಯಿಂದ ಏನೂ ಪ್ರಯೋಜನವಿಲ್ಲವೆಂದು ಎಸೆಯುವ ಬದಲು ಜಾಮ್ ಮಾಡಿ ತಿನ್ನಬಹುದು. ನಿಮ್ಮ ಮಕ್ಕಳು ಈ ಆರೋಗ್ಯಕರ ಮತ್ತು ಟೇಸ್ಟಿ ಜಾಮ್ ಇಷ್ಟಪಡುತ್ತಾರೆ. ಇದಕ್ಕಾಗಿ ಸೇಬು ಹಣ್ಣಿನ ಸಿಪ್ಪೆ ಮತ್ತು ನೀರನ್ನು ಬಾಣಲೆಯಲ್ಲಿ ಹಾಕಿ ಅದು ಮೃದುವಾಗುವವರೆಗೆ ಕುದಿಸಿ. ನಂತರ ರುಚಿಗೆ ತಕ್ಕಂತೆ ಸಕ್ಕರೆ ಹಾಕಿ ಕುದಿಸಿ. ಕೊನೆಯದಾಗಿ, ಅದಕ್ಕೆ ಅರ್ಧ ಕಪ್ ನಿಂಬೆ ರಸವನ್ನು ಸೇರಿಸಿ. ಈಗ ಸೇಬು ಹಣ್ಣಿನ ಸಿಪ್ಪೆಯ ಜಾಮ್ ಸಿದ್ಧವಾಗಿದೆ. ಇದನ್ನು ತಣ್ಣಗಾಗಿಸಿ, ಗಾಳಿಯಾಡದ ಪಾತ್ರೆಯಲ್ಲಿ ತುಂಬಿಸಿ ಮತ್ತು ಫ್ರಿಜ್ ನಲ್ಲಿ ಇಡಿ.
ಹೊಳೆಯುವ ಪಾತ್ರೆಗೆ ಸೇಬು ಸಿಪ್ಪೆ : ಕೇವಲ ಟೀ,ಜಾಮ್ ಮಾತ್ರವಲ್ಲ ಪಾತ್ರೆ ಹೊಳಪಿಗೂ ಸೇಬು ಹಣ್ಣಿನ ಸಿಪ್ಪೆ ಪ್ರಯೋಜನಕಾರಿ. ಅಲ್ಯೂಮಿನಿಯಂ ಪಾತ್ರೆಗಳ ಮೇಲಿನ ಕಲೆಗಳನ್ನು ಸ್ವಚ್ಛಗೊಳಿಸಲು ನೀವು ಸೇಬು ಹಣ್ಣಿನ ಸಿಪ್ಪೆಗಳನ್ನು ಬಳಸಬಹುದು. ಇದಕ್ಕಾಗಿ ಸೇಬು ಸಿಪ್ಪೆ ಮತ್ತು ನೀರನ್ನು ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ 30 ನಿಮಿಷಗಳ ಕಾಲ ಕುದಿಸಿ. ಸಿದ್ಧಪಡಿಸಿದ ಮಿಶ್ರಣದಿಂದ ಅಲ್ಯೂಮಿನಿಯಂ ಪಾತ್ರೆಗಳನ್ನು ಸ್ವಚ್ಛಗೊಳಿಸಿ. ಇದು ನಿಮ್ಮ ಪಾತ್ರೆಗಳ ಮೇಲಿನ ಜಿಡ್ಡಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.