ಧಾರವಾಡ: ಇಡೀ ದೇಶವೇ ಕಾತುರದಿಂದ ಕಾಯುತ್ತಿರುವ ದಿನ ಜ.22. ಏಕೆಂದರೆ ಆ ದಿನ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರ ಅಯೋಧ್ಯೆಯಲ್ಲಿ ತಲೆ ಎತ್ತಿ ನಿಲ್ಲಲಿದ್ದಾನೆ. ಆ ದಿನವನ್ನು ಕಣ್ತುಂಬಿಸಿಕೊಳ್ಳಲು ಇಡೀ ದೇಶವೇ ತುದಿಗಾಲ ಮೇಲೆ ನಿಂತಿದೆ. ಈಗಾಗಲೇ ಪ್ರಭು ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠಾಪನೆಗಾಗಿ ದೇಶದ ಮೂಲೆ ಮೂಲೆಗಳಿಂದ ಬಗೆ ಬಗೆ ವಸ್ತುಗಳು ಹೋಗುತ್ತಿವೆ.
ಇದಕ್ಕೆ ನಮ್ಮ ಹೆಮ್ಮೆಯ ಧಾರವಾಡ ಕೂಡ ಹೊರತಾಗಿಲ್ಲ. ಹೌದು! ವಿದ್ಯಾಕಾಶಿ ಧಾರವಾಡ ವಿಶಿಷ್ಟತೆಗಳಲ್ಲಿ ವಿಶಿಷ್ಟತೆ ಹೊಂದಿದ ಜಿಲ್ಲೆ. ಈ ಜಿಲ್ಲೆಯಿಂದ ಇದೀಗ ಮರ್ಯಾದಾ ಪುರುಷೋತ್ತಮನಿಗೆ ಗೊಂಗಡಿಗಳು ಹೋಗುತ್ತಿವೆ. ಗೊಂಗಡಿ ಎಂದರೆ ಅದು ಕಂಬಳಿ. ರೈತರು ಈ ಕಂಬಳಿಗಳನ್ನು ದೇವರ ಸ್ವರೂಪದಲ್ಲಿ ಕಾಣುತ್ತಾರೆ. ಶುಭ ಕಾರ್ಯಗಳಿಗೆ ಈ ಕಂಬಳಿಗಳು ಬೇಕೇ ಬೇಕು.
ಇದೀಗ ಧಾರವಾಡದಲ್ಲಿ ಪ್ರಭು ಶ್ರೀರಾಮ ಚಂದ್ರನಿಗಾಗಿಯೇ ವಿಶೇಷವಾಗಿ ತಯಾರಿಸಲಾದ ಕಂಬಳಿಗಳು ಅಯೋಧ್ಯೆಗೆ ಹೊರಟಿವೆ. ಧಾರವಾಡದ ರೈತರ ಓಣಿ ಎಂದೇ ಕರೆಯಲಾಗುವ ಕಮಲಾಪುರ ಬಡಾವಣೆಯ ಸುಭಾಷ ರಾಯಣ್ಣವರ ಅವರು ಮೂರು ತಲೆಮಾರುಗಳಿಂದ ಕಂಬಳಿ ಕಟ್ಟುತ್ತ ಬಂದಿದ್ದಾರೆ. ಇದೀಗ ಸುಭಾಷ್ ಅವರು ಅಯೋಧ್ಯೆಗೆ ಕಳುಹಿಸಲೆಂದೇ ಎರಡು ಕಂಬಳಿಗಳನ್ನು ಕಟ್ಟಿದ್ದಾರೆ. ಅಲ್ಲದೇ ಅವುಗಳನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮೂಲಕ ಅಯೋಧ್ಯೆಗೆ ಕಳುಹಿಸುವ ವ್ಯವಸ್ಥೆ ಕೂಡ ಮಾಡಿಕೊಂಡಿದ್ದಾರೆ.
ಇಂಡಿಯನ್ ಆಯಿಲ್ ಕಂಪನಿಯಲ್ಲಿ 1603 ಹುದ್ದೆಗಳು ಖಾಲಿ..! ಇಂದೇ ಕೊನೆ ದಿನ – ಬೇಗ ಅಪ್ಲೈ ಮಾಡಿ
ಈ ಕಂಬಳಿಗಳು 54 ಇಂಚು ಅಗಲ 110 ಇಂಚು ಉದ್ದ ಇವೆ. ಒಟ್ಟು 14 ಉಂಡೆ ಕುರಿ ಉಣ್ಣೆಯಿಂದ ಇವುಗಳನ್ನು ಸಿದ್ಧಪಡಿಸಲಾಗಿದ್ದು, ಇವುಗಳನ್ನು ಅಯೋಧ್ಯೆ ಕಳುಹಿಸಿಕೊಡಲಾಗುವುದು ಎಂಬ ಭರವಸೆ ಸಿಕ್ಕ ಮೇಲೆಯೇ ಸುಭಾಷ ಅವರು ಈ ಕಂಬಳಿಗಳಿಗೆ ಕರಿ ಕಟ್ಟಿದ್ದಾರೆ. ಯಾವ ಹೆಸರಿನ ಮೇಲೆ ಕರಿ ಕಟ್ಟುತ್ತಾರೋ ಆ ಕಂಬಳಿಗಳು ಅದೇ ಕೆಲಸಕ್ಕೆ ಬಳಕೆಯಾಗಬೇಕು ಎಂಬ ಪ್ರತೀತಿ ಇದೆ.
ಪ್ರಹ್ಲಾದ ಜೋಶಿ ಕೂಡ ಈಗ ಆ ಕಂಬಳಿಗಳನ್ನು ಅಯೋಧ್ಯೆಗೆ ತೆಗೆದುಕೊಂಡು ಹೋಗಲಿದ್ದಾರೆ. ಒಟ್ಟಾರೆ ಧಾರವಾಡದಿಂದ ಅಯೋಧ್ಯೆ ಕಂಬಳಿಗಳು ಪೂಜೆಗಾಗಿ ಹೊರಟಿದ್ದು, ಧಾರವಾಡದ ಹಿರಿಮೆ ಹೆಚ್ಚಿಸಿವೆ. ರಾಮನ ಮೇಲೆ ಅಪಾರ ಭಕ್ತಿ ಇಟ್ಟುಕೊಂಡು ಸುಭಾಷ ರಾಯಣ್ಣವರ ಎಂಬುವವರು ಈ ಕಂಬಳಿಗಳನ್ನು ಸಿದ್ಧಪಡಿಸಿಕೊಟ್ಟಿದ್ದು, ಅವರ ಕನಸು ನನಸಾದಂತಾಗಿದೆ.