ಬೆಂಗಳೂರು:- ಶೀಘ್ರವೇ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ಪಟ್ಟಿ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಇದು ಆಕಾಂಕ್ಷಿಗಳಲ್ಲಿ ಮತ್ತೆ ನಿರಾಸೆ ಮೂಡಿಸಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬುಧವಾರ ದಿಲ್ಲಿಗೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ನಿಗಮ- ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಮರುಚಾಲನೆ ದೊರೆಯಲಿದ್ದು, ಅಂತಿಮ ಪಟ್ಟಿ ಕೂಡ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಗರಿಗೆದರಿದ್ದವು. ಆಕಾಂಕ್ಷಿಗಳು ಕೂಡ ದಿಲ್ಲಿಯತ್ತ ನೋಟ ಹರಿಸಿದ್ದರು. ಆದರೆ “ದಿಲ್ಲಿ ಭೇಟಿ’ ಕೇವಲ ಲೋಕಸಭಾ ಚುನಾವಣೆ ಚರ್ಚೆಗೆ ಸೀಮಿತವಾಯಿತು. ಇದು ಆಕಾಂಕ್ಷಿಗಳಲ್ಲಿ ತೀವ್ರ ಬೇಸರ ಉಂಟುಮಾಡಿದೆ.
ಪ್ರತಿ ಬಾರಿ ದಿಲ್ಲಿಗೆ ಹೋದಾಗಲೂ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮೂಲಕ ಶಾಸಕರು, ಹಿರಿಯ ಕಾರ್ಯಕರ್ತರಲ್ಲಿ “ಅಧಿಕಾರ ಭಾಗ್ಯ’ ಸಿಗಬಹುದು ಎಂಬ ಆಸೆ ಮೊಳಕೆಯೊಡೆಯುತ್ತದೆ. ನಾಯಕರು ಮರಳುತ್ತಿದ್ದಂತೆ ನಿರಾಸೆಯ ಉತ್ತರ ಸಿಗುತ್ತದೆ. ಇದು ಆಕಾಂಕ್ಷಿಗಳ ಅಸಮಾಧಾನಕ್ಕೂ ಕಾರಣವಾಗುತ್ತಿದೆ. ಬೆಳಗಾವಿ ಅಧಿವೇಶನಕ್ಕೂ ಮೊದಲೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈಗ ಮತ್ತೂಂದು ಅಧಿವೇಶನ ಹತ್ತಿರ ಬರುತ್ತಿದೆ.