ಬೆಂಗಳೂರು:- ರಾಜ್ಯದಲ್ಲಿ ನಿನ್ನೆ 298 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಕೊರೋನಾ ಅಬ್ಬರ ಮುಂದುವರೆದಿದೆ. ಅಲ್ಲದೆ ನಾಲ್ಕು ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಜ.1ರಂದು 296 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಅಲೆಯ ದಾಖಲೆ. ಇದೀಗ ಗುರುವಾರ 298 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು ಬರೋಬ್ಬರಿ ನಾಲ್ಕು ಮಂದಿ ಸಾವನ್ನಪ್ಪುವ ಮೂಲಕ ಪ್ರಸಕ್ತ ಅಲೆಯ ಸಾವು 19ಕ್ಕೆ ಏರಿಕೆಯಾಗಿದೆ.
ಮೈಸೂರಿನ 60 ವರ್ಷದ ಮಹಿಳೆ ಡಿ.28ರಂದು ಜ್ವರ ಹಾಗೂ ಕೆಮ್ಮು ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಜ.3ರಂದು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ 82 ವರ್ಷದ ವ್ಯಕ್ತಿ ಐಎಲ್ಐ, ಜ್ವರ, ಕೆಮ್ಮು ಸಮಸ್ಯೆಯಿಂದ ಡಿ.28ರಂದು ದಾಖಲಾಗಿದ್ದು, ಡಿ.30ರಂದು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಬೆಂಗಳೂರು ನಿವಾಸಿ 64 ವರ್ಷದ ವ್ಯಕ್ತಿ ಸಾರಿ ಸಮಸ್ಯೆಯಿಂದ ಡಿ.29ರಂದು ದಾಖಲಾಗಿ ಜ.1ರಂದು ಸಾವನ್ನಪ್ಪಿದ್ದು, ಧಾರವಾಡದಲ್ಲಿ 63 ವರ್ಷದ ವ್ಯಕ್ತಿ ಐಎಲ್ಐ ಲಕ್ಷಣಗಳೊಂದಿಗೆ ಡಿ.30ರಂದು ದಾಖಲಾಗಿ ಜ.2ರಂದು ಸಾವನ್ನಪ್ಪಿದ್ದಾರೆ.
ಗುರುವಾರದ ವೇಳೆಗೆ ಕಳೆದ 24 ಗಂಟೆಗಳಲ್ಲಿ 7,791 ಮಂದಿಗೆ ಸೋಂಕು ಪರೀಕ್ಷೆ ನಡೆಸಿದ್ದು, ಶೇ.3.82 ಪಾಸಿಟಿವಿಟಿ ದರದಂತೆ 298 ಸೋಂಕು ಹಾಗೂ ಶೇ.1.34ರಷ್ಟು ಸಾವಿನ ದರದಂತೆ ನಾಲ್ಕು ಸಾವು ದೃಢಪಟ್ಟಿದೆ.
1,240 ಸೋಂಕಿನಲ್ಲಿ 1,168 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 72 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, 9 ಮಂದಿ ಐಸಿಯು, 9 ಮಂದಿ ಆಕ್ಸಿಜನ್ ಬೆಡ್, 3 ಮಂದಿ ವೆಂಟಿಲೇಟರ್ ಬೆಡ್ನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.