ಬೆಂಗಳೂರು:- ಐಟಿ ಇಲಾಖೆಗೆ ಗುತ್ತಿಗೆದಾರರ ಮಾಹಿತಿ ನೀಡಲು ಅಡ್ಡಿಯಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಗುತ್ತಿಗೆದಾರರ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಕೇಳಿದರೆ ಅದನ್ನು ಒದಗಿಸಲು ಯಾವುದೇ ಅಡಚಣೆ ಇಲ್ಲ ಎಂದರು.
ಮುಚ್ಚಿಡುವ ಅಗತ್ಯವಿಲ್ಲ. 10 ರೂ. ಪಾವತಿಸಿ ಆರ್ಟಿಐ ಅರ್ಜಿ ಹಾಕಿದರೆ ದಾಖಲೆ ಕೊಡುತ್ತೇವೆ. ಇನ್ನು ಆದಾಯ ತೆರಿಗೆ ಸರ್ಕಾರಿ ಸಂಸ್ಥೆ ಕೇಳಿದರೆ ಕೊಡಲ್ಲ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಆದಾಯ ತೆರಿಗೆ ಇಲಾಖೆ 6 ಬಾರಿ ಪತ್ರ ಬರೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಇದು ಸಚಿವರ ಅಥವಾ ಸರ್ಕಾರದವರೆಗೂ ಬರುವ ವಿಚಾರವಲ್ಲ. ಅಧಿಕಾರಿಗಳು ನಿರ್ಧಾರ ತೆಗೆದುಕೊಂಡು ಮಾಹಿತಿ ಒದಗಿಸುತ್ತಾರೆ ಎಂದರು.
ಇತ್ತೀಚೆಗೆ ತಾವು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಟ್ಕರಿ ಅವರನ್ನು ಭೇಟಿ ಮಾಡಿದ್ದು, ರಾಜ್ಯದಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 20 ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಪಟ್ಟಂತೆ ಚರ್ಚೆ ನಡೆಸಿದ್ದೇವೆ. ಭೂ ಸ್ವಾೀಧಿನ, ಅರಣ್ಯ ಪ್ರದೇಶದ ಪೂರ್ವಾನುಮತಿ, ನಿರಪೇಕ್ಷಣಾ ಪತ್ರ ಸೇರಿದಂತೆ ಹಲವು ರೀತಿಯ ತೊಡಕುಗಳು ಬಾಕಿ ಉಳಿದಿವೆ. ಅವುಗಳನ್ನು 3 ತಿಂಗಳಲ್ಲಿ ಬಗೆಹರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವುದಾಗಿ ಸತೀಶ್ ಜಾರಕಿಹೊಳಿ ತಿಳಿಸಿದರು.