ಬೆಂಗಳೂರು: ಶಂಕರಪುರದ ಶಂಕರಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (Akhila Karnataka Brahmin Mahasabha) ಜ 6 ಮತ್ತು 7 ರಂದು ಆಯೋಜಿಸಿರುವ ಅಭಿಜಾತೆ-2024-ರಾಜ್ಯ ಮಟ್ಟದ ಮಹಿಳಾ ಸಮಾವೇಶವನ್ನು (Women’s Conference) ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಉದ್ಘಾಟಿಸಲಿದ್ದಾರೆ.
ಧರ್ಮ- ಸಂಸ್ಕೃತಿ ಮಹಿಳೆ, ಮಾಧ್ಯಮದಲ್ಲಿ ಮಹಿಳೆಯರ ಪಾತ್ರ, ಮಹಿಳಾ ಸಬಲೀಕರಣ ಹಾಗೂ ಕೌಶಲ್ಯಾಭಿವೃದ್ಧಿ, ಕನ್ನಡ ಸಾಹಿತ್ಯ ಮತ್ತು ಮಹಿಳೆ ಸೇರಿದಂತೆ ಸಮಾವೇಶದಲ್ಲಿ ಹಲವು ವಿಚಾರ ಗೋಷ್ಠಿಗಳಿರಲಿವೆ. ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಗಣೇಶ್, ಅಲ್ಕಾ ಸುಧೀರ್ ಇನಾಮದಾರ ಧರ್ಮ- ಸಂಸ್ಕೃತಿ ಮಹಿಳೆ ವಿಷಯವಾಗಿ ವಿಚಾರ ಮಂಡನೆ ಮಾಡಲಿದ್ದಾರೆ.
ಜ.06 ರಂದು ಶ್ರೀರಾಮದರ್ಶನ’ದೊಂದಿಗೆ ನೃತ್ಯರೂಪಕ-ಕಥಕ್, ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ನಿರ್ದೇಶನದಲ್ಲಿ ಲಯ-ಲಾವಣ್ಯ-ತಾಳವಾದ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಸಾಧಕ ಮಹಿಳೆಯರನ್ನು ಗಣ್ಯರ ಉಪಸ್ಥಿತಿಯಲ್ಲಿ ಪುರಸ್ಕರಿಸಲಾಗುತ್ತದೆ.
ಎಕೆಬಿಎಂಎಸ್ ಅಧ್ಯಕ್ಷ ಅಶೋಕ್ ಹಾರನಹಳ್ಳಿ (Ashok Haranahalli) ಹಾಗೂ ಮಹಾಸಭಾದ ರಾಜ್ಯ ಮಹಿಳಾ ವಿಭಾಗದ ಸಂಚಾಲಕಿ ಶುಭಮಂಗಳ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಅಭಿಜಾತೆ-2024ದಲ್ಲಿ ಮಹಿಳೆಯರು ತಯಾರಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಮಳಿಗೆಗಳು ಆಕರ್ಷಣೆಯ ಕೇಂದ್ರಬಿಂದುವಾಗಿರಲಿದೆ.