ಹುಬ್ಬಳ್ಳಿ: 1992ರಲ್ಲಿ ಶ್ರೀ ರಾಮಜನ್ಮಭೂಮಿಗಾಗಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಚನ್ನಪೇಟೆಯ ಆಟೊರಿಕ್ಷಾ ಚಾಲಕ ಶ್ರೀಕಾಂತ ಪೂಜಾರಿಗೆ ಈಗ ವಯಸ್ಸು 54. ಆದರೆ, 31 ವರ್ಷ ಹಿಂದಿನ ಗಲಭೆ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ತಮ್ಮ ಹೆಸರಿದೆ ಎಂಬುದು ಗೊತ್ತಿರಲಿಲ್ಲ. ಪೊಲೀಸರ ಕಾರ್ಯಾಚರಣೆ ಬಗ್ಗೆ ಮಾಹಿತಿ ಇರಲಿಲ್ಲ ಅಂತೆ.
ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಶ್ರೀಕಾಂತ ಪೂಜಾರಿ ಆಗಾಗ್ಗೆ ಬೇರೆ ಬೇರೆ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿ, ಸಹಿ ಮಾಡುತ್ತಿದ್ದರೂ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗುವ ಬಗ್ಗೆ ಕಿಂಚಿತ್ತೂ ಸುಳಿವು ಇರಲಿಲ್ಲ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನಾಪತ್ತೆಯೂ ಆಗಿರಲಿಲ್ಲ. ಶ್ರೀಕಾಂತ ಪೂಜಾರಿ ವಿರುದ್ಧ 1992ರಿಂದ 2014ರ ಅವಧಿಯಲ್ಲಿ ಹುಬ್ಬಳ್ಳಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೂರು ದೊಂಬಿ, ಗಲಭೆ ಪ್ರಕರಣಗಳು ಸೇರಿ ಒಟ್ಟು 16 ಪ್ರಕರಣಗಳು ದಾಖಲಾಗಿವೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮದ್ಯ ಅಕ್ರಮ ಮಾರಾಟದ ಕುರಿತು 9 ಪ್ರಕರಣಗಳು ದಾಖಲಾದರೆ, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಜೂಜು ಪ್ರಕರಣ ಇದೆ. ಕಸಬಾ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅವರ ವಿರುದ್ಧ ಮೂರು ಪ್ರಕರಣಗಳು ಇವೆ. ಪದೇಪದೇ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಕಾರಣ ಅವರ ಹೆಸರು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿ ಸೇರಿತ್ತು. ವಯಸ್ಸು ಮತ್ತು ಉತ್ತಮ ನಡವಳಿಕೆ ಕಾರಣ 2023ರ ಜೂನ್ ತಿಂಗಳಲ್ಲಿ ರೌಡಿ ಪಟ್ಟಿಯಿಂದ ಹೆಸರು ತೆಗೆಯಲಾಯಿತು.
‘ದೀರ್ಘಾವಧಿಯಿಂದ ಬಾಕಿ ಉಳಿದ ಪ್ರಕರಣಗಳ (ಎಲ್ಪಿಸಿ) ಬಗ್ಗೆ ಕೋರ್ಟ್ ಮಾಹಿತಿ ಕೇಳಿದಾಗ, ಆಯಾ ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತಂಡ ರಚಿಸಲಾಯಿತು. ಆದರೆ, ಅಲ್ಲಿಯವರೆಗೆ ಪೊಲೀಸರಿಗೆ ಶ್ರೀಕಾಂತ ಹೆಸರು ಗಲಭೆ ಪ್ರಕರಣದಲ್ಲಿ ಇದೆ ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ. ಹಳೆಯ ಕಡತಗಳ ಪರಿಶೀಲನೆ ಬಹುದಿನಗಳಿಂದ ಆಗಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.
ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಅದರಂತೆ 2023ರ ಡಿಸೆಂಬರ್ ಅಂತ್ಯದವರೆಗೆ 28 ಪ್ರಕರಣಗಳಿಗೆ ಸಂಬಂಧಿಸಿದಂತೆ 36 ಆರೋಪಿಗಳನ್ನು ಬಂಧಿಸಲಾಯಿತು. 1992ರಲ್ಲಿ ನಗರದ ದುರ್ಗದಬೈಲ್ನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 18ರಂದು ರಾಜು ಧರ್ಮದಾಸ್ ಎಂಬುವರ ಬಂಧನವಾಗಿ, ನಂತರ ಜಾಮೀನಿನ ಮೇಲೆ ಬಿಡುಗಡೆಯಾಯಿತು. ಆದರೆ, ಡಿಸೆಂಬರ್ 29ರಂದು ಬಂಧನವಾದ ಶ್ರೀಕಾಂತ ಪೂಜಾರಿಗೆ ಜಾಮೀನು ಸಿಗಲಿಲ್ಲ. ಜನವರಿ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾದರು.
‘1992ರ ಡಿಸೆಂಬರ್ 5ರಂದು ದುರ್ಗದಬೈಲ್ನಲ್ಲಿ ಮುಸ್ಲಿಂ ವ್ಯಕ್ತಿಗೆ ಸೇರಿದ ಮಳಿಗೆಯೊಂದಕ್ಕೆ ಕೆಲವರು ಬೆಂಕಿ ಹಚ್ಚಿದ್ದರು. ಮಳಿಗೆ ಮಾಲೀಕ ಶಹರ ಠಾಣೆಯಲ್ಲಿ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು 13 ಮಂದಿ ವಿರುದ್ಧ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅವರಲ್ಲಿ ಐವರು ಕೋರ್ಟ್ಗೆ ಹಾಜರಾಗಿ ಬಿಡುಗಡೆಯಾಗಿದ್ದರು. ಉಳಿದ ಎಂಟು ಮಂದಿಗೆ ತಮ್ಮ ಹೆಸರು ಇರುವುದೇ ಗೊತ್ತಿರಲಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘2006ರಲ್ಲಿ ಎಲ್ಪಿಸಿ ಸಿದ್ಧಪಡಿಸಿದಾಗ, 1992ರ ಪ್ರಕರಣವೂ ಮತ್ತೆ ಮುನ್ನಲೆಗೆ ಬಂದಿದೆ. ಬಾಕಿ ಉಳಿದ ಎಂಟು ಜನರಲ್ಲಿ ಐವರು ಮೃತಪಟ್ಟಿದ್ದಾರೆ. ಉಳಿದ ಮೂವರು ಆರೋಪಿಗಳಾದ ರಾಜು ಧರ್ಮದಾಸ್, ರಾಮಚಂದ್ರ ಮತ್ತು ಶ್ರೀಕಾಂತ ಪೂಜಾರಿ ಪತ್ತೆಯಾದರು. ಧರ್ಮದಾಸ್ ಜಾಮೀನಿನ ಮೇಲೆ ಬಿಡುಗಡೆಯಾದರೆ, ರಾಮಚಂದ್ರಗೆ ಅನಾರೋಗ್ಯ ಸಮಸ್ಯೆಯಿದೆ. ಶ್ರೀಕಾಂತ್ಗೆ ಜಾಮೀನು ಸಿಗಲಿಲ್ಲ’ ಎಂದು ಗೊತ್ತಾಗಿದೆ.
‘ಪ್ರತಿ ಪೊಲೀಸ್ ಠಾಣೆಯಲ್ಲೂ ಪ್ರತಿವರ್ಷ ಹಲವು ಪ್ರಕರಣಗಳು ಬಾಕಿ ಇರುತ್ತವೆ. ಅವುಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುತ್ತೇವೆ. ಎಲ್ಲವನ್ನೂ ತನಿಖೆ ನಡೆಸಿ ಪರಿಶೀಲಿಸಿದಾಗ 1992ರ ಗಲಭೆ ಪ್ರಕರಣದ ಆರೋಪಿಯೂ ಪತ್ತೆಯಾಗಿದ್ದಾರೆ. ಕಾನೂನು ಪ್ರಕಾರ ಶ್ರೀಕಾಂತ ಪೂಜಾರಿಯನ್ನು ಕೋರ್ಟ್ಗೆ ಹಾಜರುಪಡಿಸಲಾಗಿದೆ’ ಎಂದು ಹುಬ್ಬಳ್ಳಿ–ಧಾರವಾಡ ಕಮಿಷನರ್ ರೇಣುಕಾ ಸುಕುಮಾರ್ ತಿಳಿಸಿದರು.
‘ಗಲಭೆ ಪ್ರಕರಣದಲ್ಲಿ ತಂದೆಯವರ ಹೆಸರು ಇರುವುದು ಬಹುಶಃ ಅವರಿಗೆ ತಿಳಿದಿತ್ತೋ ಇಲ್ಲವೋ ಗೊತ್ತಿಲ್ಲ. ಒಮ್ಮೆಯೂ ನಮ್ಮ ಜೊತೆ ಇದರ ಬಗ್ಗೆ ಚರ್ಚಿಸಿಲ್ಲ. ಅನಾರೋಗ್ಯ ಸಮಸ್ಯೆಯಿಂದ ಬಳಸುತ್ತಿದ್ದ ಅವರನ್ನು ನೋಟಿಸ್ ವಾರಂಟ್ ನೀಡದೇ ಪೊಲೀಸರು ಬಂಧಿಸಿದ್ದಾರೆ’ ಎಂದು ಶ್ರೀಕಾಂತ ಪೂಜಾರಿ ಅವರ ಪುತ್ರ ಮಂಜುನಾಥ ತಿಳಿಸಿದರು