ಅಯೋಧ್ಯೆ: ಇದೇ ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ನೇರವೇರಲಿದೆ. ಅಂದು ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮವೂ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ದೇಶ-ವಿದೇಶಗಳಿಂದ ವಿಶೇಷ ಕೊಡುಗೆಗಳನ್ನು ಶ್ರೀರಾಮನ ಭಕ್ತರು ಅಯೋಧ್ಯೆಗೆ ಕಳುಹಿಸುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹಾಗೆಯೇ ದೇಶಾದ್ಯಂತ ರಾಮನ ಭಕ್ತರು ಅಕ್ಕಿ, ತರಕಾರಿ ಹಾಗೂ ಇತರ ಆಹಾರ ಪದಾರ್ಥಗಳನ್ನು ಅಯೋಧ್ಯೆಗೆ ಕಳುಹಿಸುತ್ತಿರುವುದು ಗಮನಸೆಳೆದಿದೆ. ರಾಮಲಲ್ಲಾ ಪ್ರಾಣಪ್ರತಿಷ್ಠಾ ಸಮಾರಂಭಕ್ಕೆ ಲಕ್ಷಾಂತರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಾಗಾಗಿ ಅಕ್ಕಿ, ವಿವಿಧ ಬಗೆಯ ತರಕಾರಿಗಳು ಹಾಗೂ ಇತರ ಆಹಾರ ಪದಾರ್ಥಗಳನ್ನು ಅಯೋಧ್ಯೆಗೆ ಕಳುಹಿಸುತ್ತಿದ್ದಾರೆ.
ದೇಶದ ವಿವಿಧೆಡೆಯಿಂದ ಅಕ್ಕಿ, ಸಾಂಬಾರ್ ಪದಾರ್ಥ ಹಾಗೂ ಇತರ ಆಹಾರ ಪದಾರ್ಥಗಳು ಸೇರಿದಂತೆ ಸುಮಾರು 300 ಟನ್ ಅಗತ್ಯ ವಸ್ತುಗಳನ್ನು ಅಯೋಧ್ಯೆಗೆ ರವಾನಿಸಲಾಗುತ್ತಿದೆ. ಎಲ್ಲಾ ಆಹಾರ ಪದಾರ್ಥಗಳನ್ನು ಅಯೋಧ್ಯೆಯ ಕಾರ್ಯಶಾಲೆಯಲ್ಲಿ ಸಂಗ್ರಹಿಸಲಾಗುತ್ತಿದೆ. ನಂತರದಲ್ಲಿ ಪ್ರಸಾದ ವಿನಿಯೋಗ, ಮುಂತಾದ ಕೆಲಸಗಳಿಗೆ ಬಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಎಲ್ಲಿಂದ ಏನೇನು ಬರುತ್ತಿದೆ?
* ಜನವರಿ 22 ರಂದು ರಾಮಲಲ್ಲಾ ಪಟ್ಟಾಭಿಷೇಕ ನಡೆಯಲಿದೆ. ಇದಾದ ನಂತರ ದೇವರಿಗೆ ವಿಶೇಷ ನೈವೇದ್ಯ ಸಮರ್ಪಿಸಲಾಗುತ್ತದೆ. ಭಗವಾನ್ ಶ್ರೀರಾಮನ ತಾಯಿಯ (ಕೌಸಲ್ಯೆ) ಮನೆ ಛತ್ತೀಸ್ಗಢದಿಂದ 3,000 ಕ್ವಿಂಟಾಲ್ ಅಕ್ಕಿ ಬರುತ್ತಿದೆ. ಇದು ಇಲ್ಲಿಯವರೆಗಿನ ಅತಿ ಹೆಚ್ಚಿನ ಪ್ರಮಾಣದ ಅಕ್ಕಿ ರವಾನೆಯಾಗಿದ್ದು, ಇದು ಅಯೋಧ್ಯೆಗೆ ತಲುಪಲಿದೆ. ಇದನ್ನು ಛತ್ತೀಸ್ಗಢದ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಲಾಗಿದೆ.
* ಜನವರಿ 5 ರಂದು ಭಗವಾನ್ ರಾಮನ ಅತ್ತೆ ಮನೆಯಾದ ನೇಪಾಳದ ಜನಕ್ಪುರದಿಂದ ಬಟ್ಟೆ, ಹಣ್ಣುಗಳು ಮತ್ತು ಒಣ ಹಣ್ಣುಗಳು ಅಯೋಧ್ಯೆಗೆ ತಲುಪುತ್ತವೆ. ಇದಲ್ಲದೆ, ಉಡುಗೊರೆಗಳಿಂದ ಅಲಂಕರಿಸಲ್ಪಟ್ಟ 1,100 ಪ್ಲೇಟ್ಗಳು ಸಹ ಇರುತ್ತವೆ.
* ನೇಪಾಳದಿಂದ ಆಭರಣಗಳು, ಪಾತ್ರೆಗಳು, ಬಟ್ಟೆಗಳು ಮತ್ತು ಸಿಹಿತಿಂಡಿಗಳು ಸಹ ಬರಲಿವೆ. ಇದರಲ್ಲಿ 51 ಬಗೆಯ ಸಿಹಿತಿಂಡಿಗಳು ಇರಲಿವೆ. ಜೊತೆಗೆ ಮೊಸರು, ಬೆಣ್ಣೆ ಮತ್ತು ಬೆಳ್ಳಿಯ ಪಾತ್ರೆಗಳು ಸೇರಿವೆ.
* ಅಖಿಲ ಭಾರತ ದಗ್ಬರ್ ಸಮಾಜವು ಸುಮಾರು 450 ಕೆಜಿ ತೂಕದ ವಿಶೇಷ ಡ್ರಮ್ ತಯಾರಿಸಿದ್ದು, ಅಯೋಧ್ಯೆಗೆ ಕಳುಹಿಸುತ್ತಿದೆ. ಇದನ್ನು 2024 ಜನವರಿ 22ರ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಅಯೋಧ್ಯೆಗೆ ತಲುಪಿಸಲು ತಯಾರಿ ಮಾಡಿಕೊಂಡಿದೆ.