ಬೆಂಗಳೂರು: ಜನವರಿ 13ರಂದು ನಡೆಯುವ ಕೆ-ಸೆಟ್ (KSET) ಪರೀಕ್ಷೆಗೆ (Exam) ಹಾಜರಾಗುವ ಅಭ್ಯರ್ಥಿಗಳು http://kea.kar.nic.in ಜಾಲತಾಣದಲ್ಲಿ ಪ್ರವೇಶ ಪತ್ರವನ್ನು (Admission Letter) ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ (S Ramya) ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಮುನ್ನ ಪ್ರವೇಶಪತ್ರ ಮತ್ತು ಸರ್ಕಾರದಿಂದ ಮಾನ್ಯವಾಗಿರುವ ನಿಗದಿತ ಬಗೆಯ ಗುರುತಿನ ಪತ್ರವನ್ನು ತೋರಿಸುವುದು ಕಡ್ಡಾಯವಾಗಿದೆ. ಜೊತೆಗೆ ಪ್ರವೇಶಪತ್ರದಲ್ಲಿ ನಮೂದಿಸಿರುವ ಪರೀಕ್ಷಾ ಕೇಂದ್ರದಲ್ಲಷ್ಟೇ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು. ಅಲ್ಲದೇ ಇತ್ತೀಚಿನ ಎರಡು ಭಾವಚಿತ್ರಗಳನ್ನು ತರಬೇಕು ಎಂದು ತಿಳಿಸಿದ್ದಾರೆ.
ಪರೀಕ್ಷೆಯು ಜನವರಿ 13ರ ಬೆಳಗ್ಗೆ 10ರಿಂದ 11 ಮತ್ತು ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ನಡೆಯಲಿದೆ. ಇದರ ನಡುವೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರಹೋಗಲು ಅವಕಾಶ ಕೊಡಲಾಗುವುದಿಲ್ಲ. ಓಎಂಆರ್ ಶೀಟ್ ಮೇಲೆ ಅಭ್ಯರ್ಥಿಗಳೇನಾದರೂ ತಮ್ಮ ನೋಂದಣಿ ಸಂಖ್ಯೆ, ವಿಷಯದ ಕೋಡ್ ಮತ್ತು ಪರೀಕ್ಷಾ ಕೇಂದ್ರದ ಕೋಡ್ ಅನ್ನು ತಪ್ಪಾಗಿ ನಮೂದಿಸಿದಲ್ಲಿ ಅಂಥವರ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ