ಕೆಆರ್ ಪುರ: ಇದೇ ಮೊದಲ ಬಾರಿಗೆ ಆಯೋಜಿಸಿರುವ “ಬಾಗಿಲಿಗೆ ಬಂತು ಸರ್ಕಾರ – ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿದ್ದು. ನಾಗರಿಕರಿಂದ ಅಹವಾಲುಗಳನ್ನು ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವೀಕರಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು.
ಮಹದೇವಪುರ ವಲಯ ವ್ಯಾಪ್ತಿಗೆ ಬರುವ ಕೆ.ಆರ್ ಪುರ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳನ್ನು ಒಟ್ಟುಗೂಡಿಸಿ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಇಡೀ ಸರ್ಕಾರದ ಅಧಿಕಾರಿಗಳನ್ನು ಕರೆದು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ಸಂಜೆಯವರೆಗಿದ್ದು, ಅರ್ಜಿಯನ್ನು ನೋಂದಣಿ ಮಾಡಿಕೊಳ್ಳಬೇಕು. ಆನಂತರ, ಎಲ್ಲಾ ಅರ್ಜಿಗಳನ್ನು ಪರಿಶೀಲಿಸಲಾಗುವುದು. ನಿಮ್ಮ ಅರ್ಜಿಗಳನ್ನು ನೋಡಿ ಕೌನೂನು ಚೌಕಟ್ಟಿನಲ್ಲಿ ಆಗುತ್ತಾ ಇಲ್ಲಾ ಎನ್ನುವುದನ್ನು ಪರಿಶೀಲಿಸಿ ನಿವಾರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಬಸ್, ಒಳಚರಂಡಿ ಸಮಸ್ಯೆ, 5 ಗ್ಯಾರಂಟಿಗಳ ಬಗ್ಗೆ ಸಮಸ್ಯೆ ಇದ್ದರೆ ತಿಳಿಸಿ. ನಿಮ್ಮ ಕಷ್ಟ ಕೇಳಲು ಇಲ್ಲಿಗೆ ಬಂದಿದ್ದೇನೆ. ವಿಕಲ ಚೇತನರು, ಹಿರಿಯ ನಾಗರಿಕರನ್ನು ಸ್ಥಳದಲ್ಲೇ ಭೇಟಿ ಮಾಡುತ್ತೇನೆ.ದೃಢೀಕರಣ ಪತ್ರ ತೆಗೆದುಕೊಳ್ಳಿ. ಒಂದು ಸಂಖ್ಯೆ ಕೊಟ್ಟು ಮಾಹಿತಿ ಸಂಗ್ರಹಿಸಲಾಗುವುದು ಎಂದರು.
ನಿಮ್ಮ ಸೇವೆಯನ್ನು ಮನೆ ಬಾಗಿಲಿಗೆ ತರಲು ನಗರದ 10 ಕಡೆ ಭೇಟಿ ಕೊಟ್ಟಿದ್ದೇನೆ, ನೀವು ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ ಎಂದು ತಿಳಿಸಿದರು.
ಈ ಭಾಗದ ಶಾಸಕರು ಕುಡಿಯುವ ನೀರು, ರಸ್ತೆ, ಮೇಲುಸೇತುವೆ, ಕೆರೆ, ಸಂಚಾರ ದಟ್ಟಣೆ,ಗುತ್ತಿಗೆದಾರರ ಬಿಲ್ ಸಮಸ್ಯೆ, ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ
ಕುರಿತು ತಿಳಿಸಿದ್ದಾರೆ. ಅದನ್ನು ಮುಂದಿನ ದಿನಗಳಲ್ಲಿ ಬಗೆಹರಿಸುತ್ತೇನೆ ಎಂದು ತಿಳಿಸಿದರು.
ಬೃಹತ್ ನೀರುಗಾಲುವೆ ವಿಚಾರದಲ್ಲಿ ಹೊಸ ಮಾರ್ಗೋಪಾಯವನ್ನು ಪ್ರತಿ ಹುಡುಕಿದ್ದೇವೆ. ಹೂಳನ್ನು ತೆಗೆಯಲು ಕ್ರಮ ಕೈಗೊಳ್ಳಲಾಗುವುದು. ಇನ್ನೂ, ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ರಸ್ತೆ ವಿಸ್ತರಣೆ ಮಾಡಬೇಕಿದೆ.
170-180 ಕಿ.ಮೀ ರಾಜಕಾಲುವೆ ಪಕ್ಕ ರಸ್ತೆಗಳನ್ನು ಗುರುತಿಸಲಾಗಿದೆ. 40 ಕಿ.ಮೀ ರಸ್ತೆ ನಿರ್ಮಾಣ, ಹೊಸ ರಸ್ತೆಗಳನ್ನು ಗುರುತಿಸಬೇಕು. ಒಂದು ಮನೆಯಲ್ಲಿ-3/4 ಮನೆಗಳಿವೆ. ಹೆಚ್ಚು ಮನೆಗಳಿದ್ದರೆ ಕಡಿಮೆ ತೆರಿಗೆ ಕೊಡಲಾಗುತ್ತಿದೆ. ಆಸ್ತಿ ದಾಖಲೆಯನ್ನು ಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೆ.ಆರ್.ಪುರದ ಶಾಸಕ ಬೈರತಿ ಬಸವರಾಜು ಮಾತನಾಡಿ, ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಹೊಸದಾಗಿ ಘೋಷಣೆಯಾದ 110 ಹಳ್ಳಿಗಳಿಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಹಾಗೂ 350 ಕೋಟಿ ರೂ. ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಿಸಬೇಕು ಎಂದರು.
ಮಹಾದೇವಪುರ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ ಮಾತನಾಡಿ, ನಗರದ ಒಟ್ಟು ಶೇ. 80ರಷ್ಟು ಕಸ ಕ್ಷೇತ್ರದ ಮಿಟಗಾನಹಳ್ಳಿ ಕ್ವಾರಿಗೆ ಬರುತ್ತಿದ್ದು, ಇದು ಅಲ್ಲಿನ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಷ್ಟೇ ಅಲ್ಲದೇ ರಾಜಕಾಲುವೆಯಲ್ಲಿನ ಹೂಳು ಹಾಗೆಯಿದೆ. ಇದನ್ನು ಸ್ವಚ್ಛಗೊಳಿಸುವ ಕಾರ್ಯ ಮೊದಲು ಶುರುವಾಗಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸ್ಥಳೀಯ ಶಾಸಕರಾದ ಬಿ.ಎ.ಬಸವರಾಜ, ಮಂಜುಳಾ ಅರವಿಂದ್ ಲಿಂಬಾವಳಿ, ಮಾಜಿ ರಾಜ್ಯ ಸಭಾ ಸದಸ್ಯ ರಾಜೀವ್ ಗೌಡ, ಪಾಲಿಕೆ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.