ಪಾಟ್ನಾ: ಬಿಹಾರದಲ್ಲಿ ವಿಚಿತ್ರ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪೊಲೀಸರನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಮಕ್ಕಳಾಗದ ಮಹಿಳೆಯರನ್ನ (Impregnating Women) ಗರ್ಭಧರಿಸುವಂತೆ ಮಾಡಿದ್ರೆ ಪುರುಷರಿಗೆ 13 ಲಕ್ಷ ರೂ. ಬಹುಮಾನ ನೀಡುವುದಾಗಿ ಆಫರ್ ಕೊಟ್ಟಿದ್ದ 8 ಮಂದಿಯನ್ನ ಪೊಲೀಸರು ಬಿಹಾರದ ನವಾಡದಲ್ಲಿ ಬಂಧಿಸಿದ್ದಾರೆ. ಖತರ್ನಾಕ್ಗಳು ʻಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್ ಸರ್ವೀಸ್ʼ (All India Pregnant Job Service) ಎಂಬ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಮೊದಲಿಗೆ ಈ ಗ್ಯಾಂಗ್ ಬಿಹಾರ (Bihar) ರಾಜ್ಯದ ನವಾಡ ಜಿಲ್ಲೆಯಲ್ಲಿ ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್ ಏಜೆನ್ಸಿ ಅನ್ನೋ ಸಂಸ್ಥೆಯ ಹೆಸರಲ್ಲಿ ಜಾಹೀರಾತು ನೀಡಿತ್ತು. ಆಗ ವಾಟ್ಸಪ್, ಫೇಸ್ಬುಕ್ ಸೇರಿದಂತೆ ಎಲ್ಲಾ ಜಾಲತಾಣಗಳಲ್ಲೂ ಜಾಹೀರಾತು ಪ್ರಸಾರವಾಗಿತ್ತು. ಈ ಜಾಹಿರಾತನ್ನು ನೋಡಿದ ಪುರುಷರು ಜಾಹೀರಾತಿನ ಜೊತೆಗೆ ಇದ್ದ ವಾಟ್ಸಪ್ ನಂಬರ್ ಸಂಪರ್ಕಿಸಿದರು. ಮಕ್ಕಳಾಗದ ಸ್ತ್ರೀಯರಿಗೆ (Womens) ಸಂತಾನ ಭಾಗ್ಯ ಕೊಡುವ ಸಾಮರ್ಥ್ಯ ನಮಗಿದೆ. ಅವಕಾಶ ಕೊಡಿ ಅಂತಾ ಹಕ್ಕೊತ್ತಾಯ ಮಾಡಿದ್ದರು. ಆ ನಂತರ ವಂಚಕರ ಅಸಲಿ ಆಟ ಶುರುವಾಗಿತ್ತು.
Cashews Benefits: ಪ್ರತಿದಿನ ಗೋಡಂಬಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನವಿದೆ ಗೊತ್ತಾ..?
ಮೊದಲಿಗೆ ನೋಂದಣಿ ಶುಲ್ಕದ ಹೆಸರಲ್ಲಿ ವಂಚಕರು 799 ರೂ. ಹಣವನ್ನು ಪಾವತಿ ಮಾಡುವಂತೆ ಹೇಳಿದ್ದರು. ಹಣ ನೀಡಿ ನೋಂದಣಿ ಆದ ಬಳಿಕ ಪುರುಷರಿಗೆ ಕೆಲವು ಮಹಿಳೆಯರ ಫೋಟೋಗಳನ್ನು ವಾಟ್ಸಪ್ ಮೂಲಕ ಕಳಿಸಿದ್ದರು. ಇಷ್ಟು ಮಹಿಳೆಯರ ಪೈಕಿ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಇಷ್ಟದ ಮಹಿಳೆಯ ಜೊತೆ ಸಂಗ ಬೆಳೆಸಬಹುದು. ಆಕೆಯನ್ನು ಗರ್ಭಿಣಿ ಮಾಡಿದರೆ ನಿಮಗೆ 13 ಲಕ್ಷ ರೂ. ಬಹುಮಾನ ಎಂದು ವಂಚಕರು ಆಮಿಷ ಒಡ್ಡಿದ್ದರು.
5 ರಿಂದ 20,000 ರೂ.ವರೆಗೆ ಠೇವಣಿ ಇಡಬೇಕಿತ್ತು:
ಪುರುಷರು ಆಯ್ಕೆ ಮಾಡಿಕೊಂಡ ಮಹಿಳೆ ಜೊತೆ ದೈಹಿಕ ಸಂಪರ್ಕ ಬೆಳೆಸುವ ಮುನ್ನ ಭದ್ರತಾ ಠೇವಣಿ ಹಣ ನೀಡಬೇಕು ಎಂದೂ ವಂಚಕರು ತಾಕೀತು ಮಾಡಿದ್ದರು. ಈ ಭದ್ರತಾ ಠೇವಣಿ ಹಣ ಮಹಿಳೆಯರ ಸೌಂದರ್ಯದ ಮೇಲೆ ನಿರ್ಧಾರ ಆಗುತ್ತದೆ ಎಂದು ಹೇಳಿದ್ದರು. ಸುಮಾರು 5 ಸಾವಿರ ರೂ. ನಿಂದ 20 ಸಾವಿರ ರೂ.ವರೆಗೆ ಠೇವಣಿ ಹಣ ಕಟ್ಟಬೇಕು ಎಂದು ಹೇಳುತ್ತಿದ್ದರು. ತುಂಬಾ ಸುಂದರವಾದ ಮಹಿಳೆ ಜೊತೆ ದೈಹಿಕ ಸಂಪರ್ಕ ಬೆಳೆಸಬೇಕಿದ್ದರೆ 20 ಸಾವಿರ ರೂ. ಭದ್ರತಾ ಠೇವಣಿ ಭರಿಸಬೇಕು ಎಂದು ಸೂಚನೆ ನೀಡಲಾಗಿತ್ತು.
ಠೇವಣಿ ಪಾವತಿಸಿದ ಮೇಲೆ ಎಲ್ಲರೂ ಮಾಯ:
ಮೊದಲಿಗೆ ನೋಂದಣಿ ಶುಲ್ಕ ಪಾವತಿಸಿದ ಬಹುತೇಕರು ಭದ್ರತಾ ಠೇವಣಿ ಹಣ ಪಾವತಿ ಮಾಡುವಲ್ಲಿ ಸೋತಿದ್ದರು. ಆದ್ರೆ ಹಣ ಇದ್ದ ಕೆಲವರು ಭದ್ರತಾ ಠೇವಣಿಯನ್ನೂ ಪಾವತಿ ಮಾಡಿ ಫೋಟೋದಲ್ಲಿ ಕಂಡ ಮಹಿಳೆ ಜೊತೆ ದೈಹಿಕ ಸಂಪರ್ಕ ಬೆಳೆಸುವ ಕನಸು ಕಾಣುತ್ತಿದ್ದರು. ಆದ್ರೆ, ಹಣ ಕಟ್ಟಿಸಿಕೊಂಡ ಬಳಿಕ ವಂಚಕರು ತಮ್ಮ ಮೊಬೈಲ್ ಸಂಪರ್ಕ ಕಟ್ ಮಾಡಿಕೊಂಡುಬಿಟ್ಟರು. ಒಂದು ವೇಳೆ ಮಹಿಳೆ ಗರ್ಭಿಣಿಯಾದರೆ 13 ಲಕ್ಷ ರೂ., ಗರ್ಭ ಧರಿಸದೇ ಇದ್ದರೂ 5 ಲಕ್ಷ ರೂ. ಹಣ ಕೊಡುತ್ತೇವೆ ಎಂದು ವಂಚಕರು ಹೇಳಿದ್ದರು.
ಠೇವಣಿ ಕಟ್ಟಿಸಿಕೊಂಡ ಬಳಿಕ ನಾಪತ್ತೆಯಾಗಿಬಿಡುತ್ತಿದ್ದರು. ಇವರಿಂದ ಹಣ ಕಳೆದುಕೊಂಡ ಬಹುತೇಕರು ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೊಬೈಲ್ ಫೋನ್ ಹಾಗೂ ಪ್ರಿಂಟರ್ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಇನ್ನೂ ತಲೆಮರೆಸಿಕೊಂಡಿರುವುದಾಗಿ ತಿಳಿಸಿದ್ದಾರೆ.