ಅದಾನಿ (Adani) ಸಮೂಹದ ಕಂಪನಿಗಳ ವಿರುದ್ಧ ಹಿಂಡೆನ್ಬರ್ಗ್ ಸಂಶೋಧನಾ ವರದಿಯಲ್ಲಿನ (Hindenburg Research Report) ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯ ತೀರ್ಪು ಇಂದು ಪ್ರಕಟವಾಗಲಿದೆ.
ಸಿಜೆಐ ಡಿವೈ ಚಂದ್ರಚೂಡ್, ನ್ಯಾ. ಜೆಬಿ ಪರ್ದಿವಾಲಾ ಮತ್ತು ನ್ಯಾ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ನವೆಂಬರ್ನಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು.
ಅದಾನಿ ತನ್ನ ಷೇರಿನ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿದೆ ಎಂದು ಹಿಂಡೆನ್ಬರ್ಗ್ ವರದಿ ಬಳಿಕ ವಿವಿಧ ಅದಾನಿ ಕಂಪನಿಗಳ ಷೇರು ಮೌಲ್ಯದಲ್ಲಿ ತೀವ್ರ ಕುಸಿತವಾಗಿ ಸುಮಾರು 100 ಶತಕೋಟಿ ಡಾಲರ್ ಸಂಪತ್ತು ಕರಗಿತ್ತು. ಪ್ರಕರಣ ತನಿಖೆಗೆ ಆಗ್ರಹಿಸಿ ಹಲವು ಅರ್ಜಿ ಸಲ್ಲಿಕೆಯಾಗಿದ್ದವು.
ಸುಪ್ರೀಂಕೋರ್ಟ್ ಈ ಪ್ರಕರಣ ಪರಿಶೀಲಿಸಲು ನಿವೃತ್ತ ನ್ಯಾಯಮೂರ್ತಿ ಎ.ಎಂ ಸಪ್ರೆ ನೇತೃತ್ವದ ತಜ್ಞರ ಸಮಿತಿಯನ್ನು ರಚಿಸುವುದರ ಜೊತೆಗೆ ಸ್ವತಂತ್ರವಾಗಿ ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಸೆಬಿಗೆ ಸೂಚಿಸಿತು. ತಜ್ಞರ ಸಮಿತಿಯು ಕಳೆದ ಮೇ ತಿಂಗಳಲ್ಲಿ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಸೆಬಿಯ ಕಡೆಯಿಂದ ಯಾವುದೇ ಪ್ರಾಥಮಿಕ ಲೋಪ ಕಂಡುಬಂದಿಲ್ಲ ಎಂದು ಹೇಳಿತ್ತು.
ಹಿಂಡೆನ್ಬರ್ಗ್ ಸಂಶೋಧನಾ ವರದಿಬಿಡುಗಡೆಯಾಗುವ ಸಮಯದಲ್ಲಿ ಅದಾನಿ ಸಮೂಹದ ಷೇರುಗಳನ್ನು ಶಾರ್ಟ್ ಸೆಲ್ಲಿಂಗ್ (Short Selling) ಮಾಡುವ ಮೂಲಕ ಒಂದು ಖಾಸಗಿ ಬ್ಯಾಂಕ್ ಸೇರಿದಂತೆ 16 ಸಂಸ್ಥೆಗಳು ಭಾರೀ ಲಾಭ ಮಾಡಿರುವ ವಿಷಯ ಜಾರಿ ನಿರ್ದೇಶನಾಲಯದ (ED) ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಮಾಧ್ಯಮವೊಂದು ಹಿಂದೆ ವರದಿ ಮಾಡಿತ್ತು
ವಿದೇಶಿ ಬಂಡವಾಳ ಹೂಡಿಕೆದಾರರು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FPIs/FIIs) ಸೇರಿದಂತೆ ಒಂದು ಡಜನ್ ಕಂಪನಿಗಳು ಅದಾನಿ ಗ್ರೂಪ್ನ ಷೇರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿರುವ ವಿಷಯ ಇಡಿ ನಡೆಸಿದ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿತ್ತು.
ಕೋರ್ಟ್ ತೀರ್ಪು ಬೆನ್ನಲ್ಲೇ ಟ್ವೀಟ್ ಮಾಡಿರುವ ಗೌತಮ್ ಅದಾನಿ, ಸತ್ಯಕ್ಕೆ ಜಯ ಸಿಕ್ಕಿದೆ. ಸತ್ಯಮೇಯ ಜಯತೆ. ನಮ್ಮ ಬೆಂಬಲಕ್ಕೆ ನಿಂತವರಿಗೆ ನಾನು ಅಭಾರಿ. ದೇಶ ಅಭಿವೃದ್ಧಿಗೆ ನಮ್ಮ ಕೊಡುಗೆ ಮುಂದುವರಿಯಲಿದೆ. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.