ಜನವರಿ 7ರವರೆಗೆ ನಡೆಯಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆದ್ದು ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಳ್ಳಲು ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಎದುರು ನೋಡುತ್ತಿದೆ. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್, ಟೀಮ್ ಇಂಡಿಯಾ ತನ್ನ ಆಡುವ 11ರ ಬಳಗದಲ್ಲಿ 2 ಮಹತ್ವದ ಬದಲಾವಣೆಗಳನ್ನು ತಂದುಕೊಳ್ಳಬೇಕು ಎಂದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಎರಡೂ ಇನಿಂಗ್ಸ್ಗಳಲ್ಲಿ ಎದುರಿಸಿದ ಬ್ಯಾಟಿಂಗ್ ವೈಫಲ್ಯ ಕಾರಣ ಮೂರು ದಿನಗಳ ಒಳಗೆ ಇನಿಂಗ್ಸ್ ಮತ್ತು 32 ರನ್ಗಳ ಅಂತರದ ಹೀನಾಯ ಸೋಲನುಭವಿಸಿತು. ಇದು 3ನೇ ಆವೃತ್ತಿಯ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಫೈನಲ್ ರೇಸ್ನಲ್ಲಿ ಭಾರತ ತಂಡಕ್ಕೆ ದೊಡ್ಡ ಅಡಚಣೆ ಆಗಲಿದೆ. ಹೀಗಾಗಿ ಎರಡನೇ ಟೆಸ್ಟ್ ಗೆದ್ದು ಹಾನಿ ತಗ್ಗಿಸಿಕೊಳ್ಳಲು ಭಾರತ ತಂಡ ಶತಾಯ ಗತಾಯ ಪ್ರಯತ್ನ ಮಾಡಲಿದೆ.
“ಸಂಪೂರ್ಣ ಫಿಟ್ನೆಸ್ಗೆ ಮರಳಿದ್ದರೆ ರವೀಂದ್ರ ಜಡೇಜಾ ಎರಡನೇ ಟೆಸ್ಟ್ ಆಡಬೇಕು. ಬ್ಯಾಟರ್ಗಳಿಗೆ ನೆರವಾಗುತ್ತಿದ್ದ ಪಿಚ್ನಲ್ಲಿ ಅಶ್ವಿನ್ ಉತ್ತಮ ಆಟ ಪ್ರದರ್ಶಿಸಿದ್ದಾರೆ ಹೌದು. ಆದರೆ, ಸೆಂಚೂರಿಯನ್ ಟೆಸ್ಟ್ನಲ್ಲಿ ಭಾರತ ತಂಡದ 7ನೇ ಕ್ರಮಾಂಕದಲ್ಲಿ ಜಡೇಜಾ ಅವರ ಬ್ಯಾಟಿಂಗ್ ಕೊರತೆ ಎದ್ದು ಕಾಣಿಸುತ್ತಿತ್ತು. ಹೀಗಾಗಿ ಎರಡನೇ ಟೆಸ್ಟ್ನಲ್ಲಿ ಅಶ್ವಿನ್ ಬದಲು ಜಡೇಜಾ ಆಡಬೇಕು,” ಎಂದು ಇರ್ಫಾನ್ ಪಠಾಣ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರೋಹಿತ್ ಶರ್ಮಾ ಸಾಮಾನ್ಯವಾಗಿ ಒಂದೇ ಬೌಲಿಂಗ್ ಲೈನ್ ಅಪ್ ಉಳಿಸಿಕೊಳ್ಳಲು ಬಯಸುತ್ತಾರೆ. ಅವರು ಹೆಚ್ಚಿನ ಬದಲಾವಣೆಗೆ ಕೈ ಹಾಕುವಂತಹ ಕ್ಯಾಪ್ಟನ್ ಅಲ್ಲ. ಆದರೂ ಪ್ರಸಿಧ್ ಕೃಷ್ಣ ಜಾಗದಲ್ಲಿ ಮುಖೇಶ್ ಕುಮಾರ್ ಅವರನ್ನು ಆಡಿಸಲು ಅವರು ಪರಿಗಣಿಸಬಹುದು. ಆದರೆ, ನೆಟ್ಸ್ನಲ್ಲಿ ಪ್ರಸಿಧ್ ಆತ್ಮವಿಶ್ವಾಸದೊಂದಿಗೆ ಬೌಲಿಂಗ್ ಮಾಡಿದ್ದೇ ಆದರೆ ಅವರಿಗೆ ಮತ್ತೊಂದು ಅವಕಾಶ ಕೊಡಬೇಕು. ಎರಡನೇ ಟೆಸ್ಟ್ ಆಡಲು ಅವರಿಗೆ ಬೆಂಬಲ ನೀಡಬೇಕು,” ಎಂದಿದ್ದಾರೆ.
ಇರ್ಫಾನ್ ಪಠಾಣ್ ಆಯ್ಕೆಯ ಭಾರತ ತಂಡದ ಪ್ಲೇಯಿಂಗ್ 11
01. ರೋಹಿತ್ ಶರ್ಮಾ (ನಾಯಕ/ ಬ್ಯಾಟರ್)
02. ಯಶಸ್ವಿ ಜೈಸ್ವಾಲ್ (ಓಪನರ್)
03. ಶುಭಮನ್ ಗಿಲ್ (ಬ್ಯಾಟರ್)
04. ವಿರಾಟ್ ಕೊಹ್ಲಿ (ಬ್ಯಾಟರ್)
05. ಶ್ರೇಯಸ್ ಅಯ್ಯರ್ (ಬ್ಯಾಟರ್)
06. ಕೆಎಲ್ ರಾಹುಲ್ (ವಿಕೆಟ್ಕೀಪರ್)
07. ರವೀಂದ್ರ ಜಡೇಜಾ (ಆಲ್ರೌಂಡರ್)
08. ಶಾರ್ದುಲ್ ಠಾಕೂರ್ (ಆಲ್ರೌಂಡರ್)
09. ಜಸ್ಪ್ರೀತ್ ಬುಮ್ರಾ (ಪೇಸರ್)
10. ಮೊಹಮ್ಮದ್ ಸಿರಾಜ್ (ಪೇಸರ್)
11. ಮುಖೇಶ್ ಕುಮಾರ್ (ಪೇಸರ್)