ಬೆಳಗಾವಿ: ಈಚೆಗೆ ನಡೆದಿದ್ದ ಮಹಿಳೆಯನ್ನು ಅರೆಬೆತ್ತಲಾಗಿಸಿ ಹಲ್ಲೆ ಮಾಡಿದ ಘಟನೆ ದೇಶಾದ್ಯಂತ ಸದ್ದು ಮಾಡಿತ್ತು. ಇಂಥ ಅಮಾನವೀಯ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಗಾವಿಯಲ್ಲಿ (Belagavi) ಬೆಳಕಿಗೆ ಬಂದಿದೆ. ಮಹಿಳೆಯನ್ನು ಎರಡೆರಡು ಬಾರಿ ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತ ಮಹಿಳೆಯು 20 ಮಂದಿ ವಿರುದ್ಧ ಬೆಳಗಾವಿ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ಏನು?
ಜಮೀನು ಒತ್ತುವರಿ ಮಾಡಿದ್ದನ್ನು ಪ್ರಶ್ನಿಸಿ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು. ಮಹಿಳೆಯ ಮಾವ ಜಮೀನಿನಲ್ಲಿ ಮೇವಿನ ಬಣವಿ ಒಟ್ಟಲು ನೀಡಿದ್ದರು. 6 ಎಕರೆ ಭೂಮಿ ಆಕೆಯ ಮಾವನ ಹೆಸರಿನಲ್ಲಿತ್ತು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಈ ಜಮೀನು ಹೊಂದಿದ್ದರು. ಮಹಿಳೆಯನ್ನು ಆರೋಪಿಗಳೆಲ್ಲ ಸೇರಿ ಹೊಡೆದು ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
Side Effects of Earphone: ಫುಲ್ ಟೈಂ ಇಯರ್ ಫೋನ್ ಬಳಸ್ತೀರಾ..? ಆರೋಗ್ಯ ಸಮಸ್ಯೆ ಒಂದೆರಡಲ್ಲ
ತಿಗಡಿ ಗ್ರಾಮದ ಗ್ರಾಪಂ ಅಧ್ಯಕ್ಷೆ ಪತಿ ಸೇರಿ ಒಟ್ಟು 20 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮೊದಲು ಬೈಲಹೊಂಗಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾಗಿದ್ದರೂ ಪ್ರಕರಣದಲ್ಲಿ ಆರೋಪಿಗಳ ಬಂಧನ ಆಗಿಲ್ಲ. ಸದ್ಯ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದೆ.
ನೊಂದ ಮಹಿಳೆ ಹೇಳೋದೇನು?
ಏಕಾಎಕಿ ನನ್ನ ಮೇಲೆ 25 ರಿಂದ 30 ಜನ ಹಲ್ಲೆ ಮಾಡಿದ್ದಾರೆ. ನನ್ನ ಕೂದಲು ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ನನ್ನ ಖಾಸಗಿ ಅಂಗಾಂಗಗಳನ್ನು ಮುಟ್ಟಿ ಹಿಂಸೆ ಕೊಟ್ಟಿದ್ದಾರೆ. ದೂರು ಕೊಡಬೇಕೆಂದು ಪೊಲೀಸ್ ಠಾಣೆಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದೆ. ಅಲ್ಲಿಂದ ನನ್ನ ಎಳೆದುಕೊಂಡು ಬಂದು ಪಂಚಾಯ್ತಿಯಲ್ಲಿ ಕೂಡಿ ಹಾಕಿದರು.
ಕೂಡಿ ಹಾಕಿ ನನ್ನ ಬಳಿ ಇದ್ದ ಫೋನ್ ಹಾಗೂ ಹಣವನ್ನು ಕಸಿದುಕೊಂಡರು. ನಂತರ ನನ್ನ ಕಡೆಯಿಂದ ಬಲವಂತವಾಗಿ ಕೆಲ ದಾಖಲಾತಿಗೆ ಸಹಿ ಮಾಡಿಸಿದರು. ಸಂಜೆಯ ವೇಳೆ ನನ್ನನ್ನು ಅಲ್ಲಿಂದ ಬಿಟ್ಟರು. ಮಾರನೇ ದಿನ ನಾನು ಬಂದು ಬೈಲಹೊಂಗಲ ಠಾಣೆಗೆ ದೂರು ನೀಡಿದ್ದೇನೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ಕಲ್ಲಪ್ಪ ಡೊಂಕನ್ನವರ್, ಅಡಿವೆಪ್ಪ ದಳವಾಯಿ, ಕಲ್ಪನಾ ಡೊಂಕನ್ನವರ್, ಸಾಧಿಕ್ ಬಾಳೇಶಿ, ಶಿವಬಸಪ್ಪ ಕರಡಿಗುದ್ದಿ, ಬಸವರಾಜ್ ಕರಡಿಗುದ್ದಿ, ಮಾರುತಿ ಮುದ್ದೆನ್ನವರ್, ಸೋಮಲಿಂಗ್ ರಾವಜಿ, ಸೋಮಲಿಂಗ ಹಾದಿಮನಿ, ಮಲ್ಲವ್ವ ಕರಡಿಗುದ್ದಿ, ಬಾಬು ಕಾಜಗಾರ, ಮಾಲತಿ ರಾವಜಿ, ಗಂಗವ್ವ ಕಾಜಗಾರ, ಶಾಂತವ್ವ ಸಂಗೊಳ್ಳಿ, ಈರವ್ವ ಕರಕನ್ನವರ್, ಹರುನ್ ಕಂಡುಗೋಳ, ತಿಗಡಿ ಗ್ರಾಪಂ ಉಪಾಧ್ಯಕ್ಷೆಯ ಪತಿ ಸೇರಿ ಒಟ್ಟು 18 ಜನರ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.