ನವದೆಹಲಿ:- ಸಾಮಾನ್ಯವಾಗಿ ನಾವು ಮನುಷ್ಯರಲ್ಲಿ ಅರ್ಧ ಗಂಡು ಮತ್ತು ಅರ್ಧ ಹೆಣ್ಣಿನ ಗುಣ ಇರುವುದನ್ನು ನೋಡಿದ್ದೇವೆ.
ಆದರೆ, ಪ್ರಾಣಿ-ಪಕ್ಷಿಗಳಲ್ಲಿಯೂ ಈ ಅಸಾಮಾನ್ಯ ಸಂಗತಿ ಇದೆಯೇ? ಎಂಬ ಪ್ರಶ್ನೆ ಸಹಜವಾಗಿ ನಮ್ಮಲ್ಲಿ ಮೂಡುತ್ತದೆ. ಇದಕ್ಕೆ ಉತ್ತರ ನೀಡುವಂತಹ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೌದು, ಅರ್ಧ ಹೆಣ್ಣು, ಇನ್ನರ್ಧ ಗಂಡಿನ ಅಂಶವುಳ್ಳ ಅಪರೂಪದ ಪಕ್ಷಿಯೊಂದು ಪ್ರಾಣಿಶಾಸ್ತ್ರಜ್ಞರೊಬ್ಬರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. 100 ವರ್ಷಗಳಿಗೂ ಹೆಚ್ಚು ಅವಧಿಯ ಬಳಿಕ ಕಾಣಸಿಕ್ಕ ಎರಡನೇ ಅಪರೂಪದ ದೃಶ್ಯ ಇದಾಗಿದೆ. ಪಕ್ಷಿಯ ಹೆಸರು ಗ್ರೀನ್ ಹನಿಕ್ರೀಪರ್. ಹಸಿರು ಬಣ್ಣದಲ್ಲಿರುವ ದೇಹದ ಅರ್ಧ ಭಾಗ ಹೆಣ್ಣು ಮತ್ತು ನೀಲಿ ಬಣ್ಣದಲ್ಲಿರುವ ಇನ್ನರ್ಧ ಭಾಗ ಗಂಡು. ಈ ಪಕ್ಷಿ ಯುನೈಟೆಡ್ ಸ್ಟೇಟ್ಸ್ನ ದಕ್ಷಿಣ ಕರೊಲಿನಾ ರಾಜ್ಯದ ಕೊಲಂಬಿಯಾದಲ್ಲಿ ಕಂಡುಬಂದಿದೆ.
ಒಟಾಗೋ ಯೂನಿವರ್ಸಿಟಿ ಅಪರೂಪದ ಪಕ್ಷಿಯ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. ಒಟಾಗೋ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಪ್ರಾಣಿಶಾಸ್ತ್ರಜ್ಞ ಹ್ಯಾಮಿಶ್ ಸ್ಪೆನ್ಸರ್ ಅವರು ಕೊಲಂಬಿಯಾದಲ್ಲಿ ವಿಹಾರ ನಡೆಸುತ್ತಿದ್ದ ಸಂದರ್ಭದಲ್ಲಿ ಹವ್ಯಾಸಿ ಪಕ್ಷಿಶಾಸ್ತ್ರಜ್ಞ ಜಾನ್ ಮುರಿಲ್ಲೊ ಅವರು ಗ್ರೀನ್ ಹನಿಕ್ರೀಪರ್ ಪಕ್ಷಿಯನ್ನು ತೋರಿಸಿದರು. ಈ ಪಕ್ಷಿ ಸಾಮಾನ್ಯವಾಗಿ ತನ್ನ ಬಲಭಾಗದಲ್ಲಿ ಪುರುಷ ಪುಕ್ಕಗಳನ್ನು ಹೊಂದಿತ್ತು ಮತ್ತು ಅದರ ಎಡಭಾಗದಲ್ಲಿ ಸಾಮಾನ್ಯವಾಗಿ ಹೆಣ್ಣು ಗರಿಗಳನ್ನು ಹೊಂದಿತ್ತು. ಅಲ್ಲದೆ, ವಿಶೇಷವಾಗಿ ತಲೆಯ ಮೇಲೆಯೂ ಕೆಲವು ಗರಿಗಳನ್ನು ಹೊಂದಿತ್ತು ಎಂದು ಜರ್ನಲ್ ಆಫ್ ಫೀಲ್ಡ್ ಆರ್ನಿಥಾಲಜಿಯಲ್ಲಿ ಪ್ರಕಟವಾದ ವರದಿಯಲ್ಲಿ ಉಲ್ಲೇಖವಾಗಿದೆ.
ಅನೇಕ ಪಕ್ಷಿವೀಕ್ಷಕರು ತಮ್ಮ ಇಡೀ ಜೀವನವನ್ನು ಕಳೆದರೂ ಕೆಲವೊಮ್ಮೆ ಯಾವುದೇ ಜಾತಿಯ ಪಕ್ಷಿಗಳಲ್ಲಿ ದ್ವಿಲಿಂಗಿ ಅಥವಾ ಉಭಯಲಿಂಗಿಯನ್ನು ನೋಡಲಾರರು. ಹೀಗಿರುವಾಗ ಈ ವಿದ್ಯಮಾನವು ಪಕ್ಷಿಗಳಲ್ಲಿ ಅತ್ಯಂತ ಅಪರೂಪವಾಗಿದೆ.