ಬೆಂಗಳೂರು: ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. 2023ರಲ್ಲಿ ವಿರಾಟ್ ತಮ್ಮ ವೀರಾವೇಶವನ್ನು ಪ್ರದರ್ಶಿಸಿದ್ದು, ತಾವು ವಿಶ್ವ ಕ್ರಿಕೆಟ್ ನ ನಿಜವಾದ ಚಾಂಪಿಯನ್ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.
2023ರಲ್ಲಿ ಆಧುನಿಕ ಕ್ರಿಕೆಟ್ ಜಗತ್ತಿನ ದಿಗ್ಗಜ ವಿರಾಟ್ ಕೊಹ್ಲಿ, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ ರನ್ ಹೊಳೆ ಹರಿಸಿ 2048 ರನ್ ಗಳಿಸಿದ್ದು, ಶುಭಮನ್ ಗಿಲ್ (2154 ರನ್) ನಂತರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 765 ರನ್ ಗಳಿಸಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ಏಕದಿನ ಸ್ವರೂಪದ 50ನೇ ಶತಕ ಸಿಡಿಸಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಶತಕದ ದಾಖಲೆ ಮುರಿದಿದ್ದಾರೆ.
ಟ್ವಿಟರ್ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿರುವ ವೆಂಕಟೇಶ್ ಪ್ರಸಾದ್, ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿಯನ್ನು ಚಾಂಪಿಯನ್ ಎಂದು ಹೊಗಳಿದ್ದಾರೆ. 2023ರಲ್ಲಿ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ಹೇಳಿದ್ದಾರೆ.
ಸೆಂಚೂರಿಯನ್ ನ ಸೂಪರ್ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಅದ್ಭುತ ಫಾರ್ಮ್ ನಲ್ಲಿದ್ದ ವಿರಾಟ್ ಕೊಹ್ಲಿ, ಎರಡು ಇನಿಂಗ್ಸ್ ಗಳಲ್ಲೂ ಸ್ಫೋಟಕ ಇನಿಂಗ್ಸ್ ಕಟ್ಟಿದ್ದರು. ಆದರೆ ಅವರಿಗೆ ಇತರ ಬ್ಯಾಟರ್ ಗಳಿಂದ ಉತ್ತಮ ಬೆಂಬಲ ಸಿಗಲಿಲ್ಲ. ವಿರಾಟ್ ಮೊದಲ ಇನಿಂಗ್ಸ್ ನಲ್ಲಿ 38 ರನ್ ಹಾಗೂ ದ್ವಿತೀಯ ಇನಿಂಗ್ಸ್ ನಲ್ಲಿ 76 ರನ್ ಗಳಿಸಿದ್ದರು. ಕನ್ನಡಿಗ ಕೆ.ಎಲ್.ರಾಹುಲ್ ಮೊದಲ ಇನಿಂಗ್ಸ್ ನಲ್ಲಿ ಸಿಡಿಲಬ್ಬರದ ಶತಕ (101 ರನ್) ಸಿಡಿಸಿದ್ದರಾದರೂ ದ್ವಿತೀಯ ಇನಿಂಗ್ಸ್ ನಲ್ಲಿ ಅದೇ ಪ್ರದರ್ಶನ ತೋರುವಲ್ಲಿ ಎಡವಿದ್ದರಿಂದ ರೋಹಿತ್ ಶರ್ಮಾ ಪಡೆ ಇನಿಂಗ್ಸ್ ಹಾಗೂ 32 ರನ್ ಗಳಿಂದ ಸೋಲು ಕಂಡಿತು.