ಚಳಿ ಹೆಚ್ಚುತ್ತಿದ್ದಂತೆ ಸೋಂಕುಗಳ ಲಕ್ಷಣಗಳು ಎಲ್ಲೆಡೆ ತೀವ್ರವಾಗುತ್ತಿವೆ. ಸುಸ್ತು, ಕೆಮ್ಮು, ನೆಗಡಿ, ಜ್ವರ, ಗಂಟಲುನೋವು ಮುಂತಾದವುಗಳದ್ದೇ ಕಾರುಭಾರು ಎಲ್ಲೆಡೆ.
ಪ್ರೌಢರಲ್ಲೂ ಈ ಲಕ್ಷಣಗಳು ತೊಂದರೆ ಕೊಡುತ್ತವಾದರೂ ಮಕ್ಕಳಷ್ಟಲ್ಲ. ರೋಗ ನಿರೋಧಕ ಶಕ್ತಿ ಇನ್ನೂ ಬಲವಾಗದ ಎಳೆಯರಿಗೆ ಚಳಿಗಾಲದ ವೈರಸ್ಗಳು ನೀಡುವ ಕಾಟ ಒಂದೆರಡು ದಿನಗಳಿಗೆ ಮುಗಿಯುವುದೇ ಇಲ್ಲ. ಮೊದಲು ನೆಗಡಿಯೊ ಕೆಮ್ಮೊ ಶುರುವಾಗಿ ಮಾರನೇ ದಿನಕ್ಕೆ ಜೋರು ಜ್ವರ, ನಡುಕ, ಬೆನ್ನಿಗೇ ಗಂಟಲು ನೋವು ಅಥವಾ ತಲೆನೋವು ಇಲ್ಲವೇ ಕಿವಿ ನೋವು, ಏಳಲಾರದ ಸುಸ್ತು ಇತ್ಯಾದಿ ಇತ್ಯಾದಿ. ನಾಲ್ಕು ದಿನ ಕಾಡಿಸಿದ ಜ್ವರ ಹೇಗೊ ಬಿಟ್ಟರೂ, ಕಫ-ಕೆಮ್ಮು ತಾರಕಕ್ಕೇರಿ ಇನ್ನೂ ನಾಲ್ಕು ದಿನ ಚೇತರಿಸಿಕೊಳ್ಳುವುದಕ್ಕೆ ಬೇಕು ಎಂಬಂಥ ಸ್ಥಿತಿಗೆ ಪುಟಾಣಿಗಳನ್ನು ತರುತ್ತದೆ. ಚಳಿಗಾಲದ ಸೋಂಕುಗಳು ಮಕ್ಕಳನ್ನು ಕಾಡದಂತೆ ತಡೆಯುವುದು ಹೇಗೆ?
ಒಬ್ಬರಿಂದೊಬ್ಬರಿಗೆ ವೇಗವಾಗಿ ಹರಡುವ ಈ ವೈರಸ್ಗಳು ಮಕ್ಕಳಲ್ಲಿ ಪ್ರಸರಣವಾಗುವುದು ಇನ್ನೂ ತ್ವರಿತವಾಗಿ. ಶಾಲೆಯಲ್ಲಿ ಅಥವಾ ಡೇ ಕೇರ್ನಲ್ಲಿ ಒಟ್ಟಿಗೆ ಆಡುವ, ಅಕ್ಕಪಕ್ಕ ಕುಳಿತುಕೊಳ್ಳುವ, ಒಬ್ಬರ ವಸ್ತುಗಳನ್ನು ಇನ್ನೊಬ್ಬರು ಮುಟ್ಟುವ ಸಂದರ್ಭಗಳು ದಿನವೂ ಇರುವುದರಿಂದ, ಮಕ್ಕಳಲ್ಲಿ ಸೋಂಕುಗಳು ತಡೆಯುವು ಸಾಹಸವೇ ಸರಿ. ಅದರಲ್ಲೂ ಕೆಲವು ತಿಂಗಳ ಹಿಂದೆ ಉಂಟಾದ ಸೋಂಕಿನಿಂದ ಪ್ರತಿರೋಧಕ ಶಕ್ತಿ ಜಾಗೃತವಾಗಿರುತ್ತದೆ ಎಂದು ಮಕ್ಕಳ ವಿಷಯದಲ್ಲಿ ಹೇಳಲಾಗದು. ಹಾಗಾಗಿ ಚಿಣ್ಣರು ಆಗಾಗ ಹುಷಾರು ತಪ್ಪುವುದು ಸಾಮಾನ್ಯ ಎಂಬಂತೆ ಆಗುತ್ತದೆ.
ಆಯಾ ವರ್ಷದ ಫ್ಲೂ ಋತುವಿನಲ್ಲಿ ಯಾವೆಲ್ಲಾ ವೈರಸ್ಗಳು ಬರಬಹುದು ಎಂಬ ಲೆಕ್ಕಾಚಾರದ ಮೇಲೆ ಫ್ಲೂ ಲಸಿಕೆಯನ್ನು ತಯಾರಿಸಲಾಗುತ್ತದೆ. ಹಾಗಾಗಿ ಪ್ರತಿ ವರ್ಷ ಮಕ್ಕಳಿಗೆ ಫ್ಲೂ ಲಸಿಕೆಯನ್ನು ಹಾಕಿಸುವುದು ಉತ್ತಮ. ಇದರಿಂದ ರೋಗ ನಿರೋಧಕಶಕ್ತಿಯನ್ನು ತಾತ್ಕಾಲಿಕವಾಗಿ ಉತ್ತೇಜಿಸಿದಂತಾಗುತ್ತದೆ. ಒಂದೊಂದು ಸೋಂಕು ತಾಗಿದರೂ, ಅದರ ತೀವ್ರತೆ ಕಡಿಮೆ ಇರುತ್ತದೆ. ರೋಗ ಗುಣವಾಗುವುದಕ್ಕೆ ಬೇಕಾಗುವ ಸಮಯವೂ ಕಡಿಮೆಯೇ.
ಆರೋಗ್ಯಯುತ ಆಹಾರವನ್ನು ಮಕ್ಕಳಿಗೆ ತಿನ್ನಿಸುವುದು ಯಜ್ಞದಂತೆಯೇ. ಆದರೂ ಸೋಂಕುಗಳೊಂದಿಗೆ ಹೋರಾಡುವ ಶಕ್ತಿ ಬೇಕೆಂದರೆ ಮಕ್ಕಳ ಆಹಾರಾಭ್ಯಾಸಗಳು ಸತ್ವಯುತವಾಗಿ ಇರಲೇಬೇಕು. ಜಂಕ್ ಸೇವನೆಯಿಂದ ಪ್ರತಿರೋಧಕ ಶಕ್ತಿ ತೀವ್ರವಾಗಿ ಕುಂಠಿತಗೊಳ್ಳುತ್ತದೆ. ಹಸಿರು ತರಕಾರಿಗಳು- ಸೊಪ್ಪು, ಋತುಮಾನದ ಹಣ್ಣುಗಳು, ಇಡೀ ಧಾನ್ಯಗಳು, ಮೊಳಕೆ ಕಾಳುಗಳು, ಡೈರಿ ಉತ್ಪನ್ನಗಳು, ಬೀಜಗಳು, ಮೊಟ್ಟೆ, ಮೀನು ಮುಂತಾದವು ಮಕ್ಕಳಿಗೆ ಅಗತ್ಯವಾಗಿ ಬೇಕಿರುವ ಆಹಾರಗಳ ಪಟ್ಟಿಯಲ್ಲಿವೆ. ಕರಿದ, ಸಂಸ್ಕರಿತ, ಸಕ್ಕರೆಭರಿತ, ಪ್ಯಾಕ್ ಮಾಡಿದ ಆಹಾರಗಳು ತರುವುದು ಹಾನಿಯನ್ನೇ ಹೊರತು ಆರೋಗ್ಯವನ್ನಲ್ಲ.
ಕೋವಿಡ್ ಭೀತಿಯೂ ಮತ್ತೆ ತಲೆದೋರುತ್ತಿರುವ ಹಿನ್ನೆಲೆಯಲ್ಲಿ, ಕೆಲವು ಹಳೆಯ ಅಭ್ಯಾಸಗಳನ್ನು ಮಕ್ಕಳಿಗೆ ನೆನಪಿಸುವುದು ಅಗತ್ಯ. ವೈಯಕ್ತಿಕ ಅಂತರವನ್ನು ಸಾಧ್ಯವಾದಷ್ಟು ಕಾಯ್ದುಕೊಳ್ಳುವುದು, ಆಗಾಗ ಕೈ ಶುಚಿ ಮಾಡುವುದು, ಲಿಫ್ಟ್, ಮೆಟ್ಟಿಲಿನ ಕಂಬಿಗಳು ಮುಂತಾದ ಎಲ್ಲರೂ ಮುಟ್ಟುವಂಥ ಜಾಗಗಳಲ್ಲಿ ಕೈ ಇಡದೇ ಇರುವುದು, ಕಣ್ಣು-ಬಾಯಿ-ಮೂಗು ಮುಟ್ಟದಿರುವುದು, ನೆಗಡಿ-ಕೆಮ್ಮು ಇದ್ದರೆ ಮಾಸ್ಕ್ ಹಾಕುವುದು ಮುಂತಾದ ಕೋವಿಡ್ ಕಾಲದ ಅಭ್ಯಾಸಗಳು ಚಳಿಗಾಲದಲ್ಲಿ
ಮಕ್ಕಳು ನಿತ್ಯವೂ ಮನೆಯಿಂದ ಹೊರಗೆ ಆಡುವುದನ್ನು ಪ್ರೋತ್ಸಾಹಿಸಿ. ಹೊರಾಂಗಣ ಆಟಗಳಲ್ಲಿ ಸೋಂಕು ಹರಡುವ ಪ್ರಮಾಣ ಕಡಿಮೆ. ಬಿಸಿಲಲ್ಲಿ ಮಕ್ಕಳು ಆಡಿದಾಗ ಪ್ರತಿರೋಧಕ ಶಕ್ತಿ ಇನ್ನಷ್ಟು ಬಲವಾಗುತ್ತದೆ. ಜಡವಾಗಿರುವುದು, ಸ್ಕ್ರೀನ್ ಮುಂದೆ ಬಿದ್ದುಕೊಂಡು ತಿನ್ನುವುದು- ಇಂಥವೆಲ್ಲಾ ಮಕ್ಕಳ ಶಕ್ತಿ-ಸಾಮರ್ಥ್ಯಗಳನ್ನು ಕುಗ್ಗಿಸುತ್ತವೆ.
ಬೆಳೆಯುವ ಮಕ್ಕಳಿಗೆ 9-10 ತಾಸು ನಿದ್ದೆ ಅಗತ್ಯ. ಇದರಿಂದ ಶರೀರ ತಂತಾನೆ ಸರಿಮಾಡಿಕೊಳ್ಳಲು ಅಗತ್ಯವಾದ ವಿಶ್ರಾಂತಿ ನೀಡಿದಂತಾಗುತ್ತದೆ. ನಿದ್ದೆಯ ಸಮಯವನ್ನು ಟಿವಿ, ಮೊಬೈಲ್ಗಳು ಕಸಿದರೆ ಇದಕ್ಕಿಂತ ದೊಡ್ಡ ಸಂಕಷ್ಟ ಇನ್ನೊಂದಿಲ್ಲ. ಒಂದೊಮ್ಮೆ ಸೋಂಕು ಬಂದರೆ, ಔಷಧಿ-ಉಪಚಾರಗಳ ಜೊತೆಗೆ ಭರಪೂರ ವಿಶ್ರಾಂತಿ-ನಿದ್ದೆಯೂ ಮಕ್ಕಳಿಗೆ ಅತ್ಯಗತ್ಯ.