ಬೆಂಗಳೂರು:- ಬೆಂಗಳೂರು ಉತ್ತರ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವ ಕುರಿತು ಮಾಜಿ ಸಿಎಂ ಡಿವಿ ಸದಾನಂದಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ‘ನಾನು 30 ವರ್ಷದ ರಾಜಕಾರಣ ನೋಡಿದ್ದೇನೆ. ಹೊಸಬರು ಬರಬೇಕು ಎನ್ನುವ ಕಾರಣಕ್ಕೆ ಚುನಾವಣೆ ರಾಜಕೀಯದಿಂದ ದೂರ ಸರಿಯುವ ಪ್ರಯತ್ನ ಮಾಡಿದ್ದೇನೆ. ಆದರೆ, ಅಶೋಕ, ಬೊಮ್ಮಾಯಿ, ಡಾ. ಅಶ್ವತ್ಥನಾರಾಯಣ, ಸೋಮಶೇಖರ್, ದಾಸರಹಳ್ಳಿ ಮುನಿರಾಜು ಸೇರಿದಂತೆ ಪಕ್ಷದ ಎಲ್ಲ ನಾಯಕರು ನೀವೇ ಸ್ಪರ್ಧಿಸಿ ಎಂದು ಒತ್ತಡ ಹಾಕುತ್ತಿದ್ದಾರೆ’ ಎಂದರು.
‘ನಾನು ನನ್ನ ಕ್ಷೇತ್ರದಲ್ಲಿ ಯಾರನ್ನೂ ದೂರ ಇಟ್ಟವನಲ್ಲ. ಎಲ್ಲರ ವಿಶ್ವಾಸ ಗಳಿಸಿದ್ದೇನೆ. ಅನೇಕ ಆರೋಪ, ಅಪವಾದ ಬಂದಾಗಲೂ ಎಲ್ಲರೂ ಜೊತೆಗೆ ನಿಂತಿದ್ದಾರೆ. ಸಣ್ಣ ಕೆಲಸ ಮಾಡಿ ದೊಡ್ಡ ಪ್ರಚಾರ ಪಡೆಯುವ ವ್ಯಕ್ತಿ ನಾನಲ್ಲ. ಈ ಹಂತದಲ್ಲಿ ನಾನು ಏನೂ ಹೇಳುವುದಿಲ್ಲ. ಪಕ್ಷ ಏನು ತೀರ್ಮಾನ ಮಾಡುತ್ತದೊ ನೋಡಬೇಕು’ ಎಂದರು.
ಬೆಂಗಳೂರು ಉತ್ತರ ಕ್ಷೇತ್ರದ ಮೇಲೆ ಮಾಜಿ ಸಚಿವ ವಿ. ಸೋಮಣ್ಣ ಕಣ್ಣಿಟ್ಟಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಸೋಮಣ್ಣನವರೇ ನಾನು ಸ್ಪರ್ಧಿಸುವಂತೆ ಹೇಳಿದ್ದಾರೆ. ವಿರೋಧಿಸುತ್ತಿದ್ದವರೆಲ್ಲ ನಾನೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಿರುವಾಗ ಸೋಮಣ್ಣ ಉತ್ತರಕ್ಕೆ ಆಕಾಂಕ್ಷಿ ಆಗುವುದು ಎಲ್ಲಿಂದ ಬಂತು’ ಎಂದರು.